ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಪ್ರಾಬಲ್ಯ ಮುರಿಯಲು ‘ಕೈ’ ಪಣ

ಹಳೇ ಹುಲಿ– ಹೊಸ ಕಲಿ, ಖಾತೆ ತೆರೆವ ಯತ್ನದಲ್ಲಿ ಬಿಜೆಪಿ
Last Updated 6 ಮೇ 2018, 10:54 IST
ಅಕ್ಷರ ಗಾತ್ರ

ಹಾಸನ: ಹಾಸನ ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿರುವ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಸ್‌.ಪ್ರಕಾಶ್‌, ಕಳೆದ ಬಾರಿ ಪರಾಭವಗೊಂಡಿರುವ ಕಾಂಗ್ರೆಸ್‌ನ ಎಚ್‌.ಕೆ.ಮಹೇಶ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ಸ್ಪರ್ಧಿಸಿದ್ದಾರೆ.

ಶಿವಸೇನೆ, ಆರ್‌ಪಿಐ, ಎಐಎಂಇಪಿ ಹಾಗೂ ಪಕ್ಷೇತರರು ಅಖಾಡದಲ್ಲಿದ್ದು, ಇವರ ಸ್ಪರ್ಧೆ ನಗಣ್ಯ ಎನ್ನುವ ಸ್ಥಿತಿಯಿದೆ. ಐದು ಚುನಾವಣೆ ಎದುರಿಸಿರುವ ಪ್ರಕಾಶ್‌, ಒಂದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹೇಶ್‌ ಎದುರು ಹೊಸಮುಖ ಪ್ರೀತಂ ಜೆ.ಗೌಡ ಕಣದಲ್ಲಿದ್ದಾರೆ.

ಮೂವರು ಅಭ್ಯರ್ಥಿಗಳು ದಾಸಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕಳೆದ ಸಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಚೇತರಿಕೆ ಕಂಡಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಈ ಭಾಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿ ಹೋಗಿರುವುದು ಆಯಾ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಉಂಟು ಮಾಡಿದೆ.

ಆಲೂಗೆಡ್ಡೆ ಬೆಳೆ ನಾಶ, ನಗರ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೆರೆ, ಕಟ್ಟೆಗಳನ್ನು ಭರ್ತಿ ಮಾಡದಿರುವುದು. ಚುನಾವಣೆಯಲ್ಲಿ ಪರಿಣಾಮ ಬೀರಲಿವೆ.

ಜೆಡಿಎಸ್‌ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿವೆ. ಪ್ರಕಾಶ್‌ ಅವರು ಕುಟುಂಬ ಸಮೇತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಕಾಶ್‌ ಅವರ ಸಹೋದರ ಎಚ್‌.ಎಸ್‌.ಅನಿಲ್‌ಕುಮಾರ್‌ ನಗರಸಭೆ ಅಧ್ಕ್ಷರಾಗಿದ್ದರೆ, ಪುತ್ರ ಸ್ವರೂಪ್‌ ಕಂದಲಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ.

ಕುಟುಂಬದಲ್ಲಿ ಮೂವರು ರಾಜಕಾರಣಿಗಳನ್ನು ಹೊಂದಿರುವುದು ಚುನಾವಣೆ ವೇಳೆ ಪ್ರಕಾಶ್‌ ಅವರಿಗೆ ಪೂರಕವಾಗುವ ಸಾಧ್ಯತೆ ಇದೆ.

ಹಾಸನದಲ್ಲಿ ದಾಸಗೌಡ ಮತ್ತು ಮುಳ್ಳುಗೌಡ ಎಂಬ ಉಪಜಾತಿಗಳ ನಡುವೆ ರಾಜಕೀಯ ಕಾದಾಟ ನಡೆಯುತ್ತಿದೆ. ಇದು ಹಾಸನ ತಾಲ್ಲೂಕಿಗೆ ಮಾತ್ರ

ಸೀಮಿತ. ಈ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌–ಜೆಡಿಎಸ್‌ ಯಾವಾಗಲೂ ದಾಸಗೌಡ ಸಮುದಾಯದವರನ್ನೇ ಕಣಕ್ಕಿಳಿಸುತ್ತವೆ. ಇಲ್ಲಿ ದೇವೇಗೌಡರ ನಾಮಬಲದ ಮೇಲೆ ಮುಳ್ಳುಗೌಡರು ಜೆಡಿಎಸ್‌ ಅಭ್ಯರ್ಥಿ ಪರ ನಿಲ್ಲುವುದರಿಂದ ಪ್ರಕಾಶ್‌ ಗೆಲುವು ಸಾಧ್ಯವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹಾಸನ ನಗರದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಮತಗಳ ಸಂಖ್ಯೆಯೊಂದಿಗೆ ಸಣ್ಣಪುಟ್ಟ ಸಮುದಾಯಗಳ ಮತಗಳು ಏರಿಕೆ ಕಂಡಿದೆ. ಮೇಲ್ನೋಟಕ್ಕೆ ಒಕ್ಕಲಿಗ ಸಮುದಾಯದ ಮತಗಳು ಮೂರು ಪಕ್ಷಗಳ ನಡುವೆ ಹಂಚಿಕೆಯಾಗಲಿವೆ.

ಪಕ್ಷದ ಆಂತರಿಕ ವಿರೋಧದ ವಿರೋಧದ ನಡುವೆಯೂ ಕೊನೆ ಕ್ಷಣದಲ್ಲಿ ಟಿಕೆಟ್‌ ಪಡೆದ ಪ್ರೀತಂ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಕ್ಷೇತ್ರದಾದ್ಯಂತ ದೇವಸ್ಥಾನಗಳ

ಜೀರ್ಣೋದ್ಧಾರ, ಹಬ್ಬ, ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ

ಉಚಿತ ಕುಡಿಯುವ ನೀರು ಪೂರೈಕೆ, ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳ ಸೇವೆ ಒದಗಿಸುವ ಮೂಲಕ ಜೆಡಿಎಸ್‌ ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್‌ ಹಿಡಿದಿಡುವ ಯತ್ನದಲ್ಲಿದೆ.

ಕಾಂಗ್ರೆಸ್‌ ಅಭ್ಯರ್ಥಿ, ಸಿದ್ದರಾಮಯ್ಯ ಸರ್ಕಾರದ ಸಾಧನೆ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಜತೆಗೆ ಅಹಿಂದ ಮತಗಳು ಸಂಪೂರ್ಣವಾಗಿ ತಮ್ಮೆಡೆಗೆ ವಾಲಬಹುದು ಎಂಬ ಲೆಕ್ಕಾಚಾರದ ಜತೆಗೆ ಮುಸ್ಲಿಂ ಮತದಾರರ ಸಂಖ್ಯೆ ಗೆಲುವಿನ ದಡ ಸೇರಿಸಬಹುದು ಎನ್ನುವುದು ಅವರ ನಿರೀಕ್ಷೆಯಾಗಿದೆ. ಆದರೆ, ಕಳೆದ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದಲ್ಲಿ ಅಷ್ಟಾಗಿ ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ ಎನ್ನುವ ಅಸಮಾಧಾನವೂ ಇದೆ.

ಕಣದಲ್ಲಿ ಹುರಿಯಾಳುಗಳು
ಎಚ್.ಎಸ್.ಪ್ರಕಾಶ್ (ಜೆಡಿಎಸ್‌)
ಎಚ್.ಕೆ.ಮಹೇಶ್ (ಕಾಂಗ್ರೆಸ್‌)
ಪ್ರೀತಂ ಜೆ.ಗೌಡ (ಬಿಜೆಪಿ)
ಸಿ.ಹೇಮಂತ್ ಕುಮಾರ್ (ಶಿವಸೇನೆ)
ಕೆ.ಎಸ್.ನಿರ್ವಾಣಯ್ಯ (ಆರ್ ಪಿಐ )
ಕೆ.ಎಚ್.ಸತೀಶ್ (ಪಕ್ಷೇತರ )
ಜಮೀರ್ ತಾಜ್ (ಎಐಎಂಇಪಿ )
ಧರ್ಮೇಗೌಡ (ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ)
ಎಚ್.ಎ.ನಂಜೇಗೌಡ (ಲೋಕ ಅವಾಜ್ ದಳ)
ಅಕ್ಮಲ್ ಜಾವೇದ್, ಆರ್.ಜಿ.ಸತೀಶ್, ಕೆ.ಜಿ.ಜಾಕೋಬ್, ಮಹಮ್ಮದ್ ಶರ್ಜೀತ್ ( ಸ್ವತಂತ್ರ ಅಭ್ಯರ್ಥಿಗಳು)

ಗ್ರಾಮೀಣ ಮತದಾರರೇ ಪ್ರಧಾನ

ಹಾಸನ ಕಸಬಾ, ಸಾಲಗಾಮೆ ಹೋಬಳಿಗಳು ಹಾಗೂ ಹಾಸನ ನಗರವನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯ ಮತಗಳು ನಗರದಲ್ಲಿ ಕೇಂದ್ರಿತವಾಗಿವೆ. ಸುಮಾರು 90 ಸಾವಿರ ಮತದಾರರು ನಗರವಾಸಿಗಳಾಗಿದ್ದಾರೆ. 1.16 ಲಕ್ಷ ಗ್ರಾಮೀಣ ಮತದಾರರು ಇದ್ದಾರೆ. ಈ ವರೆಗಿನ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ವ್ಯಾಪ್ತಿಯಲ್ಲಿನ ಮತದಾನ ಪ್ರಮಾಣ ಕಡಿಮೆಯಾಗಿದೆ. ಗ್ರಾಮೀಣ ಮತದಾರರ ಮನವೊಲಿಸುವ ಅಭ್ಯರ್ಥಿಗೆ ಮುನ್ನಡೆ ಅವಕಾಶ ಹೆಚ್ಚಿದೆ. ಹಾಗಾಗಿ ಅಭ್ಯರ್ಥಿಗಳ ಹೆಜ್ಜೆ ಹಳ್ಳಿ ದಾರಿಯತ್ತ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT