ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ; ಶಿಕ್ಷಕರ ಪ್ರತಿಭಟನೆ

ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಧರಣಿ
Last Updated 9 ಜುಲೈ 2019, 12:35 IST
ಅಕ್ಷರ ಗಾತ್ರ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರು ಶಾಲೆಗಳನ್ನು ಬಂದ್ ಮಾಡಿಕೊಂಡು ಬಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ‘ಪದವೀಧರ ಶಿಕ್ಷಕರು’ ಎಂದು ಪರಿಗಣಿಸಬೇಕು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಇರುವುದರಿಂದ, ಈಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ‘ಕೇವಲ ಕೋರಿಕೆ’ ವರ್ಗಾವಣೆ ನಡೆಸಬೇಕು. ಆಗ್ರಹಿಸುತ್ತೇವೆ. ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್‌ಎ) ಶಿಕ್ಷಕರ ವೇತನವನ್ನು ಪ್ಲ್ಯಾನ್‌ನಿಂದ ನಾನ್‌ ಪ್ಲ್ಯಾನ್‌ಗೆ ಅಳವಡಿಸಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ–ವಿದ್ಯಾರ್ಥಿ ಅನುಪಾತವನ್ನು ಗುರುತಿಸುವಾಗ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ, ಹೆಚ್ಚುವರಿ ಪ್ರಕ್ರಿಯೆಯನ್ನು ಆರಂಭಿಸಬೇಕು. 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸಿನ ಪ್ರಕಾರ ಮುಖ್ಯ ಗುರುಗಳಿಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕರ ಹುದ್ದೆಯವರೆಗೂ ಬಡ್ತಿ ನೀಡಬೇಕು.

ಗ್ರಾಮೀಣ ಕೃಪಾಂಕ ಶಿಕ್ಷಕರ, ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳು ಈಡೇರದಿದ್ದರೆ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ, ‘ವಿಧಾನ ಸೌಧ ಚಲೋ’ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ಅವರು ಶಿಕ್ಷಕರಿಂದ ಮನವಿಪತ್ರ ಸ್ವೀಕರಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ, ಉಪಾಧ್ಯಕ್ಷ ಅಲ್ಲಾಭಕ್ಷ ವಾಲೀಕಾರ, ಖಜಾಂಚಿ ಜುಬೇರ್ ಕೆರೂರ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಗೌಡರ, ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಣಮಂತ ಕೊಣದಿ, ರೀತಾ ಕುಲಕರ್ಣಿ, ತಾಲ್ಲೂಕುಗಳ ಪದಾಧಿಕಾರಿಗಳಾದ ಬಿ.ಎನ್.ಪಾಟೀಲ, ಶಿವಾನಂದ ಮಂಗಾನವರ, ಅಶೋಕ ಬೂದಿಹಾಳ, ಎಸ್.ಎಸ್.ಬಾಣಿ, ಎ.ಎಂ.ಹಳ್ಳೂರ, ವೈ.ಬಿ.ಪಾಟೀಲ, ಎ.ಎಸ್.ಸೊನ್ನಗಿ, ಎಂ.ಎಸ್.ಚೌಧರಿ, ಬಿ.ಆರ್.ತೇರದಾಳ, ಆರ್.ಎನ್.ಅಂಗಡಿ, ಸಿ.ಕೆ.ಭಜಂತ್ರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT