ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಿದ್ಯುತ್ ಪರಿವರ್ತಕಗಳ ತಯಾರಕ ಗುರಣ್ಣ

ಸಿಂದಗಿಯಲ್ಲಿ ಮೇಘಾ ಪವರ್ ಕಂಟ್ರೋಲ್ ಕಾರ್ಖಾನೆ
Last Updated 10 ಜುಲೈ 2019, 19:30 IST
ಅಕ್ಷರ ಗಾತ್ರ

ಸಿಂದಗಿ: ವಿದ್ಯುತ್ ಪರಿವರ್ತಕಗಳು ಆಗಾಗ್ಗೆ ಸುಟ್ಟು ಹೋಗುವುದರಿಂದ ಬೆಳೆಗಳಿಗೆ ನೀರು ಹರಿಸಲು ರೈತರು ತೊಂದರೆ ಅನುಭವಿಸುವುದನ್ನು ಅರಿತ ವ್ಯಕ್ತಿಯೊಬ್ಬರು ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫರ್ಮರ್‌)ಗಳ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ.

ಇದುವರೆಗೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ವಿದ್ಯುತ್ ಪರಿವರ್ತಕ ತಯಾರಿಕಾ ಕಾರ್ಖಾನೆ ಇತ್ತು. ನೆರೆಯ ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲೂ ಇರಲಿಲ್ಲ. ಇದನ್ನು ಅರಿತ ಸಿಂದಗಿ ತಾಲ್ಲೂಕು ಕನ್ನೊಳ್ಳಿ ಗ್ರಾಮದ ಗುರಣ್ಣ ಬಸಪ್ಪ ಹುಣಚ್ಯಾಳ ಅವರು ಸಿಂದಗಿ ಪಟ್ಟಣದ ಬಂದಾಳ ರಸ್ತೆಯ ಗಣೇಶ ನಗರದಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ.

ಇವರು ಮೋರಟಗಿಯ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮೆಕ್ಯಾನಿಕಲ್ ವಿಷಯದಲ್ಲಿ ಐಟಿಐ ಶಿಕ್ಷಣ ಪಡೆದಿದ್ದಾರೆ. ನಂತರ ಆರ್.ಎನ್.ಶೆಟ್ಟಿ ಕಂಪನಿಯ ಮೆಕ್ಯಾನಿಕಲ್ ವಿಭಾಗದಲ್ಲಿ ಆರು ವರ್ಷ ಕೆಲಸ ಮಾಡಿದ್ದಾರೆ. ಅದಾದ ಬಳಿಕ ಐದು ವರ್ಷ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ರೈತರ ಸಮಸ್ಯೆಗಳಿಗೆ ಕೈಜೋಡಿಸುವ ತೀರ್ಮಾನ ಕೈಗೊಂಡು, ಬಂದಾಳ ರಸ್ತೆಯಲ್ಲಿರುವ ನಿವೇಶನದಲ್ಲಿ ಕೈಗಾರಿಕೆ ಸ್ಥಾಪಿಸಿದ್ದಾರೆ. ಇದಕ್ಕಾಗಿ ವಿಜಯಪುರ ಸಹಕಾರಿ ಬ್ಯಾಂಕ್ ಮತ್ತು ಸಿಂದಗಿ ಕರ್ನಾಟಕ ಬ್ಯಾಂಕ್‌ನಿಂದ ₹75 ಲಕ್ಷ ಸಾಲ ಪಡೆದುಕೊಂಡಿದ್ದಾರೆ.

ಹೆಸ್ಕಾಂ, ಜೆಸ್ಕಾಂಗಳಿಗೆ ವಿದ್ಯುತ್ ಪರಿವರ್ತಕಗಳನ್ನು ಪೂರೈಕೆ ಮಾಡಲು ಹಾಗೂ ಉತ್ತಮ ಗುಣಮಟ್ಟದ ಟ್ರಾನ್ಸ್‌ಫರ್ಮರ್‌ ಎಂಬ ಅಧಿಕೃತ ಮುದ್ರೆ ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ದೊರಕಿದೆ. ಸಂಬಂಧಿಸಿದ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸಿ, ರೈತರಿಗೆ ಮಾರಾಟ ಮಾಡಲು ಅನುಮತಿ ನೀಡುವುದಷ್ಟೇ ಬಾಕಿ ಇದೆ. 15 ದಿನಗಳಲ್ಲಿ 30 ಟ್ರಾನ್ಸ್‌ಫರ್ಮರ್‌ಗಳನ್ನು ಸಿದ್ಧಪಡಿಸಿದ್ದಾರೆ. ಒಂದು ಟ್ರಾನ್ಸ್‌ಫರ್ಮರ್‌ಗೆ ₹54 ಸಾವಿರ ದರ ನಿಗದಿಪಡಿಸಲಾಗಿದೆ. ಒಂದು ಟಿ.ಸಿ ತಯಾರಿಸುವ ಕಾರ್ಮಿಕನಿಗೆ ₹2,400 ಸಂಬಳ, ಊಟ, ವಸತಿ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಏಳು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

‘ನಮ್ಮ ಟಿ.ಸಿಗಾಗಿ ಸುರಪುರ, ಶಹಾಪುರ, ಯಾದಗಿರಿ, ಅಫಜಲಪುರ, ಜೇವರ್ಗಿ ಕಡೆಗಳಿಂದ ಬೇಡಿಕೆ ಇದೆ. ಟಿ.ಸಿ ತಯಾರಿಸಲು ಬೇಕಾಗುವ ವಸ್ತುಗಳನ್ನು ದೆಹಲಿ, ಬೆಂಗಳೂರು, ಪುಣೆ ಹಾಗೂ ಮುಂಬೈನಿಂದ ತರಿಸಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಬೇಕಾಗಿರುವ ಎಚ್.ವಿ ಯಂತ್ರ ಒಂದಿದೆ. ಇನ್ನೊಂದನ್ನು ಖರೀದಿಸಲಾಗುವುದು. ಅದಾದ ನಂತರ ತಿಂಗಳಿಗೆ 100 ಟಿ.ಸಿಗಳನ್ನು ತಯಾರಿಸಬಹುದಾಗಿದೆ’ ಎಂದು ಮಾಲೀಕ ಗುರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪರ್ಕ: -99166 16364, 98447 56364

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT