ಮಂಗಳವಾರ, ಆಗಸ್ಟ್ 3, 2021
27 °C
ಹಣವಂತರ ರಾಜಕಾರಣ: ಕೆ.ಎನ್. ರಾಜಣ್ಣ ಆತಂಕ

ಜಿ.ಪಂ ಚುನಾವಣೆಗೆ ₹1 ಕೋಟಿ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಜಕಾರಣದಲ್ಲಿ ಬಡವರು, ಅರ್ಹರು ಅಧಿಕಾರಕ್ಕೆ ಬರುವಂತಹ ವಾತಾವರಣ ಸೃಷ್ಟಿಯಾದರೆ ಮಾತ್ರ ಉತ್ತಮ ಅಭಿವೃದ್ಧಿ ಕಾರ್ಯ ನಿರೀಕ್ಷಿಸಬಹುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ವಾಲ್ಮೀಕಿ ವಿದ್ಯಾವರ್ಧಕ ಸಂಘದಿಂದ ಭಾನುವಾರ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚುನಾವಣೆಯಲ್ಲಿ ಹಣವಂತರು, ಕಪ್ಪು ಹಣ ಇರುವವರು, ಮುಂದೆ ಕಳ್ಳ ದುಡ್ಡು ಮಾಡುವವರು ಅಧಿಕಾರಕ್ಕೆ ಬಂದರೆ ಅಂತಹವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬಡವರು, ಅರ್ಹರನ್ನು ಅಧಿಕಾರಕ್ಕೆ ತರಬೇಕು ಎಂದು ಸಲಹೆ ಮಾಡಿದರು.

ಪ್ರಾಮಾಣಿಕವಾಗಿ ಬದುಕುವುದಕ್ಕೆ ರಾಜಕೀಯ ವ್ಯವಸ್ಥೆ ಬಿಡುತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಾಗಬೇಕಾದರೆ ಎರಡು ಎಕರೆ ಹೊಲ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗೆ ಹಣ ಎಲ್ಲಿಂದ ತರುವುದು. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಸ್ಥಿತಿ
ಯೂ ಇದೇ ರೀತಿ ಇದೆ. ಈಗ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಬೇಕಾದರೆ ₹1
ಕೋಟಿ ಹಣ ಬೇಕಾಗುತ್ತದೆ. ವ್ಯವಸ್ಥೆ ಹೀಗಿ
ರಬೇಕಾದರೆ ಬಡವರು ಅಧಿಕಾರಕ್ಕೆ ಬರಲು ಸಾಧ್ಯವೆ ಎಂದು ಪ್ರಶ್ನಿಸಿದರು.

‘ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳು ರಾಜಕೀಯದಲ್ಲಿ ಅಧಿಕಾರಕ್ಕೆ ಬರುವುದು ಬಹಳ ಕಷ್ಟ. ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ನಮ್ಮ ಸಮುದಾಯವಿದೆ ಎಂಬುದು ಬಹಳಷ್ಟು ಜನರಿಗೆ ಅರಿವೇ ಇರಲಿಲ್ಲ. ಬಲಾಢ್ಯ ಕೋಮುಗಳು ಸಣ್ಣ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ. ಇಂತಹ ದಬ್ಬಾಳಿಕೆಗೆ ಅಂತ್ಯ ಕಾಣಿಸಬೇಕು ಎಂಬ ನಿಟ್ಟಿನಲ್ಲಿ ರಾಜಕಾರಣದಲ್ಲಿ ಇದ್ದೇನೆ’ ಎಂದರು.

‘ಎಲ್ಲಾ ಜಾತಿ, ವರ್ಗಗಳಿರುವ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ನಾಯಕ ಸಮುದಾಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸಿ ಜನರ ಶೋಷಣೆ ತಡೆಯಬೇಕು. ಜಿಲ್ಲೆಯಲ್ಲಿ ನಮ್ಮ ಸಮುದಾಯದವರನ್ನು ಶೋಷಣೆ ಮಾಡಲು ಮುಂದುವರೆದ ಸಮುದಾಯ ಹೆದರುತ್ತದೆ. ಯಾಕೆಂದರೆ ಸಮುದಾಯದ ಹಿಂದೆ ನಾನಿದ್ದೇನೆ’ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿದ ಪಾಲಿಕೆ ಮೇಯರ್ ಹಾಗೂ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ಜಿ.ಕೃಷ್ಣಪ್ಪ, ‘ನನ್ನ ಅಧಿಕಾರಾವಧಿಯಲ್ಲಿ ಸಮಾಜ ಹಾಗೂ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಧಿಕಾರ ಇರಲಿ, ಇಲ್ಲದಿರಲಿ ಸಮಾಜದ ಬಡವರಿಗೆ ಸಹಾಯ ಮಾಡುವುದು ಮೊದಲ ಆದ್ಯತೆ. ಮೇಯರ್ ಸ್ಥಾನಕ್ಕೆ ಗೌರವ ತಂದುಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ವಾಲ್ಮೀಕಿ ವಿದ್ಯಾವರ್ಧಕ ಸಂಘ ₹2.75 ಲಕ್ಷ ಷೇರು ಬಂಡವಾಳದಿಂದ ಆರಂಭಗೊಂಡು, ಈ ವರ್ಷ 1.5 ಕೋಟಿ
ಲಾಭ ಗಳಿಸಿ, ಶೇ 18ರಷ್ಟು ಡಿವಿಡೆಂಡ್ ನೀಡುವ ಮಟ್ಟಕ್ಕೆ ಬೆಳೆದಿದೆ ಎಂದರು.

ಮೇಯರ್ ಬಿ.ಜಿ.ಕೃಷ್ಣಪ್ಪ, ಗುಬ್ಬಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ವಾಲ್ಮೀಕಿ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಭೀಮಣ್ಣ, ಅಧ್ಯಕ್ಷ ಪುರುಷೋತ್ತಮ್, ಖಜಾಂಚಿ ರಾಜೇಂದ್ರ ನಾಯಕ್, ನಿರ್ದೇಶಕರಾದ ಶಾಂತಲಾ ರಾಜಣ್ಣ, ಡಿ.ಎಸ್.ಶಿವಸ್ವಾಮಿ, ಕೆಂಪಹನುಮಯ್ಯ, ಅಂಜನ್‍ಕುಮಾರ್ ವಾಲ್ಮೀಕಿ, ವಿಜಯ್‍ಕುಮಾರ್, ರವಿಕುಮಾರ್, ಜಿ.ತಿಪ್ಪೇಸ್ವಾಮಿ, ಸರಸ್ವತಿ, ಕಸ್ತೂರಿ, ರಾಜಕುಮಾರ್, ನಾಗರಾಜಯ್ಯ, ನರಸಿಂಹಕೃಷ್ಣ, ಉಮೇಶ್, ದೇವರಾಜ್, ಕೆಜಿಐಡಿ ಜಿಲ್ಲಾ ವಿಮಾಧಿಕಾರಿ ಡಿ.ಬಿ.ಗೌರಿಶಂಕರ್ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.