ಸೋಮವಾರ, ಜನವರಿ 20, 2020
20 °C

ಪ್ರಧಾನಿ ಕಾರ್ಯಕ್ರಮಕ್ಕೆ 1.50 ಲಕ್ಷ ಜನ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರಿನಲ್ಲಿ ಜ.2 ರಂದು ನಡೆಯುವ ರೈತ ಸಮಾವೇಶಕ್ಕೆ ಸುಮಾರು 1.50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಧ್ವನಿವರ್ಧಕ, ಎಲ್‌ಇಡಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ಅಂದು ಮಧ್ಯಾಹ್ನ 2.15ಕ್ಕೆ ತುಮಕೂರಿಗೆ ಆಗಮಿಸುವ ಪ್ರಧಾನಿಗಳು ನೇರವಾಗಿ ಸಿದ್ಧಗಂಗಾ ಮಠಕ್ಕೆ ತೆರಳಿ ಡಾ.ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದು, ಕೆಲಕಾಲ ಮಠದ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಿದ್ಧಲಿಂಗ ಸ್ವಾಮೀಜಿಯ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನಿಗಳು ತುಮಕೂರಿನಿಂದಲೇ ದೇಶದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ, ಅಂದು ದೇಶದ ವಿವಿಧ ರಾಜ್ಯಗಳ ಒಟ್ಟು 28 ಪ್ರಗತಿಪರ ರೈತರಿಗೆ ಕೃಷಿ ಕರ್ಮಣ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಕಾರ್ಯಕ್ರಮವು 5.30ರೊಳಗೆ ಮುಕ್ತಾಯವಾಗಲಿದೆ ಎಂದರು.

ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಕಾರ್ಯಕ್ರಮಕ್ಕೆ ಮಣಿಪುರ, ಜಾರ್ಖಂಡ್ ಮುಖ್ಯಮಂತ್ರಿ ಹಾಗೂ ಉತ್ತರ ಖಂಡದ ರಾಜ್ಯಪಾಲರು ಭಾಗವಹಿಸುತ್ತಿದ್ದಾರೆ. ಅಲ್ಲದೆ, ರಿಂಗ್‌ರೋಡ್, ಶಿರಾ ರಸ್ತೆ, ಟೌನ್‌ಹಾಲ್‌ ರಸ್ತೆಯಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಪ್ರಧಾನಿ ಭೇಟಿ ನೀಡಲಿರುವ ಸಿದ್ಧಗಂಗಾ ಮಠ, ಹೆಲಿಪ್ಯಾಡ್ ಹಾಗೂ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಮಸಾಲ ಜಯರಾಮ್, ಬಿ.ಸಿ.ನಾಗೇಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು