ಹೇಮಾವತಿಯಿಂದ 3 ಟಿಎಂಸಿ ನೀರು ಹರಿಸಲು ಒತ್ತಾಯ

ತಿಪಟೂರು: ತಾಲ್ಲೂಕಿನ ಅಂತರ್ಜಲ ವೃದ್ಧಿ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹೇಮಾವತಿ ನಾಲೆಯಿಂದ 3 ಟಿಎಂಸಿ ಅಡಿ ನೀರು ಹರಿಸಬೇಕೆಂದು ರೈತ ಹೋರಾಟಗಾರ ಬಳ್ಳೇಕಟ್ಟೆ ಬಿ.ಬಿ. ಸಿದ್ದಲಿಂಗಮೂರ್ತಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ಅಂತರ್ಜಲ ಕೆಳಹಂತಕ್ಕೆ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವಂತಾಗಿದೆ. ತಾಲ್ಲೂಕಿನ ಜನರು ಸಂಪೂರ್ಣವಾಗಿ ಹೇಮಾವತಿ ನಾಲೆ ನೀರನ್ನು ಅವಲಂಬಿಸಿದ್ದಾರೆ. ಗೌಡನಕಟ್ಟೆ, ಮತ್ತಿಹಳ್ಳಿ, ಗುರುಗದಹಳ್ಳಿ, ರಾಮಚಂದ್ರಾಪುರ, ಶಿವರ, ಕೆರೆಗೋಡಿ, ಮೇಲಾಪುರ, ಅರಳಗುಪ್ಪೆ, ಕುಪ್ಪಾಳು ಕೆರೆಗಳಿಗೆ ನೀರಿನ ಅಗತ್ಯವಿದೆ. ಇವುಗಳಲ್ಲಿ ಹಲವು ಕೆರೆಗಳಿಗೆ ನೈಸರ್ಗಿಕವಾಗಿ ನೀರು ಹರಿಯಲಿದ್ದು, ಉಳಿದ ಕೆರೆಗಳಿಗೆ ಏತ ನೀರವಾರಿ ಸೋಲರ್ ಮೂಲಕ ವಿದ್ಯುತ್ ಅಭಾವ ಬಾರದೇ ನೀರು ಹರಿಯುತ್ತದೆ’ ಎಂದರು.
ಹಲವಾರು ವರ್ಷಗಳಿಂದ ಹೊನ್ನವಳ್ಳಿ ಭಾಗಕ್ಕೆ ನೀರು ಹರಿಯದಿರುವುದು ದುರಂತದ ಸಂಗತಿಯಾಗಿದೆ. ನೀರಿನ ಹಂಚಿಕೆಯಲ್ಲಿ ಹೆಚ್ಚಳವಾದರೆ ಮಾತ್ರ ತಾಲ್ಲೂಕಿನ ವಿವಿಧೆಡೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಕೂಡಲೇ ಸಚಿವರು ಈ ಬಗ್ಗೆ ಕಾಳಜಿವಹಿಸಿ ನೀರನ ಹಂಚಿಕೆ ಹೆಚ್ಚಳ ಮಾಡಿ ವಿವಿಧ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ನೀರನ್ನು ಹಂಚಿಕೆ ಮಾಡಡಿದ್ದರೆ ತಾಲ್ಲೂಕಿನಾದ್ಯಂತ ಹೋರಾಟ ಸಮಿತಿಯನ್ನು ರಚನೆ ಮಾಡಿ ಗ್ರಾಮಮಟ್ಟದಲ್ಲಿ ಜನಸಾಮಾನ್ಯರಿಗೆ ಜಾಗೃತಗೊಳಿಸಿ ಹೋರಾಟ ಮಾಡುವ ಚಿಂತನೆಯನ್ನು ನಡೆಸಿರುವುದಾಗಿ ತಿಳಿಸಿದರು.
ಕೆರಗೋಡಿ ಕೆ.ಎನ್.ಯೋಘಾನಂದ್, ತಡಸೂರು ಟಿ.ಸಿ.ನಾಗರಾಜು, ಗಿರೀಶ್ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.