ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರಾಗಿ ಕ್ವಿಂಟಲ್‌ಗೆ ₹3,846 ನಿಗದಿ

Published 23 ನವೆಂಬರ್ 2023, 4:56 IST
Last Updated 23 ನವೆಂಬರ್ 2023, 4:56 IST
ಅಕ್ಷರ ಗಾತ್ರ

ತುಮಕೂರು: ಈ ಬಾರಿ ರಾಗಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ₹3,846 ನಿಗದಿಪಡಿಸಿದ್ದು, ಜಿಲ್ಲೆಯ 11 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಜಿಲ್ಲಾ ಆಡಳಿತ ನಿರ್ಧರಿಸಿದೆ.

ಡಿ. 1ರಿಂದ ರೈತರ ನೋಂದಣಿ ಕಾರ್ಯ ಪ್ರಾರಂಭಿಸಿ, ಜನವರಿ 1ರಿಂದ ಮಾರ್ಚ್ 31ರ ವರೆಗೆ ರಾಗಿ ಖರೀದಿಸಲು ಬುಧವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕಿನಲ್ಲಿ ತಲಾ 2, ಗುಬ್ಬಿ, ಹುಳಿಯಾರು, ಮಧುಗಿರಿ, ಶಿರಾ, ತಿಪಟೂರು, ತುಮಕೂರು, ತುರುವೇಕೆರೆಯಲ್ಲಿ ತಲಾ 1 ಕೇಂದ್ರ ಸೇರಿದಂತೆ ಒಟ್ಟು 11 ಕೇಂದ್ರಗಳನ್ನು ತೆರೆಯಲಾಗುತ್ತದೆ.

ರಾಗಿ ಖರೀದಿ ಸಂಬಂಧ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ‘ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಖರೀದಿಸಿದ ದಾಸ್ತಾನು ಸಂಗ್ರಹಕ್ಕೆ ಸ್ಥಳಾವಕಾಶದ ಕೊರತೆಯಾಗದಂತೆ ನಿಗಾ ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.

ರಾಗಿ ಖರೀದಿಸುವ ಹಂತದಲ್ಲಿ ಗುಣಮಟ್ಟ ದೃಢೀಕರಿಸಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್‌ ನೇಮಿಸಬೇಕು. ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಲು ಮೂರನೇ ವ್ಯಕ್ತಿಯಾಗಿ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು. ರಾಗಿ ಸಂಗ್ರಹಕ್ಕೆ ಅಗತ್ಯವಿರುವ ಗೋಣಿ ಚೀಲಗಳನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒದಗಿಸಬೇಕು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ‘ಜಿಲ್ಲೆಯಲ್ಲಿ ಕಳೆದ ಬಾರಿ 61,550 ರೈತರಿಂದ 8,95,876 ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT