ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಸರ್ಕಾರದಲ್ಲೂ ಶೇ 40 ಕಮಿಷನ್: ಗುತ್ತಿಗೆದಾರರ ಆರೋಪ

ಪ್ರತಿ ಕಾಮಗಾರಿಗೂ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ
Published : 29 ಆಗಸ್ಟ್ 2024, 14:14 IST
Last Updated : 29 ಆಗಸ್ಟ್ 2024, 14:14 IST
ಫಾಲೋ ಮಾಡಿ
Comments

ತುಮಕೂರು: ಕಾಮಗಾರಿ ಮುಗಿದ ನಂತರ ಹಣ ಬಿಡುಗಡೆಗೆ ಲಂಚ ನೀಡುವುದು ನಿಂತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲೂ ಶೇ 40ರಷ್ಟು ಲಂಚ ಕೊಡಬೇಕಾಗಿದೆ. ಲಂಚದ ಹಾವಳಿ ನಿಲ್ಲದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರು ಇಲ್ಲಿ ಗುರುವಾರ ಆಕ್ರೋಶ ಹೊರ ಹಾಕಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಕಾಮಗಾರಿಗೆ ಶೇ 40ರಷ್ಟು ಕಮಿಷನ್ ಕೊಡಬೇಕಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಶೇ 40ಕ್ಕಿಂತಲೂ ಹೆಚ್ಚು ಲಂಚ ನೀಡಬೇಕಿದೆ. ಹಣ ನೀಡದೆ ಬಿಲ್ ಬಿಡುಗಡೆ ಮಾಡುತ್ತಿಲ್ಲ. ನಮ್ಮ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ವಿಧಾನಸಭೆ ಚುನಾವಣೆಗೆ ಮುನ್ನ ‘ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ. ಕಮಿಷನ್ ದಂಧೆ ನಿಲ್ಲಿಸಲಾಗುವುದು’ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿದ್ದರು. ಅವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಲಂಚದ ‍ಪ್ರಮಾಣ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಗಿದೆ. ಹಿಂದೆ ಕೊಟ್ಟಷ್ಟು ಹಣ ಪಡೆದುಕೊಂಡು ಬಿಲ್ ಹಣ ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಇಂತಿಷ್ಟೇ ಕೊಡುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರವೂ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಅಸಮಾಧಾನ ತೋಡಿಕೊಂಡರು.

ಮೊದಲು ಹಿರಿತನದ ಆಧಾರದಲ್ಲಿ ಎಲ್ಒಸಿ ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಹಣ ಕೊಟ್ಟವರ ಬಿಲ್ ಪಾವತಿಸುವಂತೆ ಸಚಿವರು, ಶಾಸಕರೇ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯ ಬಿಲ್ ಬಿಡುಗಡೆಗೆ ಎಂಜಿನಿಯರ್‌ಗಳ ಮೂಲಕ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಲಂಚ ತಲುಪಿಸಬೇಕಿದೆ. ಚಿಕ್ಕನಾಯಕಹಳ್ಳಿಯಲ್ಲಿ ಎಂಜಿನಿಯರುಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಜೆಜೆಎಂನಲ್ಲಿ ಹಣ ಬಿಡುಗಡೆಗೆ ಲಂಚ ಕೇಳಿದ್ದರಿಂದ ಲೋಕಾಯುಕ್ತರಿಗೆ ಹಿಡಿದು ಕೊಡಬೇಕಾಯಿತು ಎಂದು ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೊಂಡು ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದೆ. ವಾಸ್ತವವಾಗಿ ಹಣ ಬಿಡುಗಡೆ ಆಗಿರುವುದಿಲ್ಲ. ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಬಿಲ್‌ಗಾಗಿ ವರ್ಷಗಟ್ಟಲೇ ಕಾಯಬೇಕು. ಕೊನೆಗೆ ಲಂಚ ಕೊಟ್ಟು ಹಣ ಬಿಡುಗಡೆ ಮಾಡಿಸಬೇಕಿದೆ ಎಂದು ದೂರಿದರು.

ರಾಜ್ಯದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು ₹31 ಸಾವಿರ ಕೋಟಿ ಬಾಕಿ ಬರಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಗುತ್ತಿಗೆದಾರ ಚಿಕ್ಕೇಗೌಡ, ‘ತಾಲ್ಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜನಿಯರುಗಳು ಲಂಚಕ್ಕೆ ಪೀಡಿಸುತ್ತಿದ್ದಾರೆ. ಜೆಜೆಎಂ ಯೋಜನೆಯಲ್ಲಿ ₹34 ಲಕ್ಷ ಮೊತ್ತದ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿ ಒಂದು ವರ್ಷ ಕಳೆದರು ಬಿಲ್ಲು ಪಾವತಿ ಮಾಡಲಿಲ್ಲ. ಲಂಚಕ್ಕೆ ಒತ್ತಾಯಿಸಿದ್ದರಿಂದ ಲೋಕಾಯುಕ್ತರ ಮೊರೆ ಹೋಗಬೇಕಾಯಿತು’ ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‍ ಕುಮಾರ್, ಖಜಾಂಚಿ ಕೋದಂಡರಾಮಯ್ಯ, ಸಹಕಾರ್ಯದರ್ಶಿ ಹರೀಶ್ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT