ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೆತ್ ಆಡಿಟಿಂಗ್’ಗೆ ಹೆಚ್ಚಿದ ಬೇಡಿಕೆ; ಐಸಿಯುನಲ್ಲಿ 663ಕ್ಕೆ 441 ಸಾವು!

ನಿಲ್ಲದ ಸಾವಿನ ಸರಣಿ
Last Updated 16 ಮೇ 2021, 19:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಕೊರೊನಾ ಸೋಂಕಿತ 663 ಮಂದಿಗೆ ಚಿಕಿತ್ಸೆ ನೀಡಿದ್ದು, ಅದರಲ್ಲಿ 441 ಮಂದಿ ಸಾವನ್ನಪ್ಪಿದ್ದಾರೆ. ಕೊನೆಗೆ ಐಸಿಯುನಲ್ಲಿ ಬದುಕಿ ಹೊರ ಬಂದಿದ್ದು ಕೇವಲ 222 ಮಂದಿ ಮಾತ್ರ!

ಇದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದ ಮಾಹಿತಿ. ಶನಿವಾರ ವರ್ಚುವಲ್ ಸಭೆ ನಡೆಸಿದ ಸಮಯದಲ್ಲಿ ಈ ಲೆಕ್ಕ ಕೊಡಲಾಗಿದೆ.

ಈ ಅಂಕಿ ಅಂಶಗಳನ್ನು ಗಮನಿಸಿದರೆ ಐಸಿಯುನಲ್ಲಿ ಚಿಕಿತ್ಸೆ ಪಡೆದ ಶೇ 60– 70ರಷ್ಟು ಜನರು ಮೃತಪಟ್ಟಿದ್ದಾರೆ ಎಂದಾಯಿತು. (10 ಮಂದಿ ಚಿಕಿತ್ಸೆಗೆ ದಾಖಲಾದರೆ 6ರಿಂದ 7 ಮಂದಿ ಸಾವು). ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ ಅಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ 23 ಮಂದಿ ಸಾವನ್ನಪ್ಪಿದರೆ, ಇಲ್ಲಿ ಐಸಿಯು, ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳಿದ್ದರೂ ಸಾವನ್ನಪ್ಪುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ.

ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಾದರೆ ಸಾವು ಖಚಿತ ಎಂಬ ಭಾವನೆ ಜನರಲ್ಲಿ ಮೂಡಿದೆ. ಒಳಗೆ ಹೋದರೆ ಹೊರಗೆ ಬರುವುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಸಾವಿನ ಪ್ರಮಾಣ ತಗ್ಗಿಸಲು ತುರ್ತು ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಆಸ್ಪತ್ರೆ ಮೇಲೆ ರೋಗಿಗಳಿಗೆ ವಿಶ್ವಾಸ ಮೂಡುವುದಿಲ್ಲ. ಅಲ್ಲಿನ ಐಸಿಯು ವ್ಯವಸ್ಥೆ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತದೆ.

ಸಾವಿನ ಮಾಹಿತಿ: ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವನ್ನಪ್ಪುವವರ ಮಾಹಿತಿ ನೀಡುವಲ್ಲೂ ವ್ಯತ್ಯಾಸ ಮಾಡಲಾಗುತ್ತಿದೆ. ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಐಸಿಯುನಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿದ್ದರೆ, ಇತರೆ ವಿಭಾಗಗಳು, ತಾಲ್ಲೂಕು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಸಾವನ್ನಪ್ಪಿರಬೇಕು? ಸಾವಿನ ಸಂಖ್ಯೆಗೂ ಹಾಗೂ ಆರೋಗ್ಯ ಇಲಾಖೆ ನೀಡುತ್ತಿರುವ ಮಾಹಿತಿಗೂ ತಾಳೆಯಾಗುತ್ತಿಲ್ಲ. ಸಾವಿನ ಮಾಹಿತಿ ಮರೆಮಾಚಲಾಗುತ್ತಿದೆ ಎಂದು ವೈದ್ಯರೊಬ್ಬರು ತಮ್ಮ ಲೆಕ್ಕಾಚಾರವನ್ನು ಮುಂದಿಡುತ್ತಾರೆ.

ಮೇ 13ರಂದು ಜಿಲ್ಲಾ ಆಸ್ಪತ್ರೆಯೊಂದರಲ್ಲೇ 14 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಲ್ಲಿ 13 ವರ್ಷದ ಬಾಲಕಿ ಹಾಗೂ ಬಾಲಕರು ಸಾವನ್ನಪ್ಪಿದ್ದಾರೆ. ಆದರೆ ಈ ಮಾಹಿತಿಯನ್ನು ಈವರೆಗೂ ನೀಡಿಲ್ಲ. ಗುರುವಾರ ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ 7, ಶುಕ್ರವಾರ 7, ಶನಿವಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಒಂದೇ ದಿನದಲ್ಲಿ 14 ಮಂದಿ ಸಾವನ್ನಪ್ಪಿದರೂ ಆ ಮಾಹಿತಿಯನ್ನು ಏಕೆ ನೀಡಿಲ್ಲ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಲಾಭವೇನು: ಸಾವಿನ ಲೆಕ್ಕವನ್ನು ಮುಚ್ಚಿಡುವುದರಿಂದ ಯಾರಿಗೆ ಲಾಭ? ಎಂಬ ಪ್ರಶ್ನೆ ಎದುರಾಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಒಮ್ಮೆಲೆ ದೊಡ್ಡ ಸಂಖ್ಯೆ ನೀಡಿದರೆ ಸಮಾಜದಲ್ಲಿ ಮತ್ತಷ್ಟು ಆತಂಕ ಮೂಡಬಹುದು. ಇಲ್ಲವೆ ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಭಾವನೆ ಬರಬಹುದು. ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಚಿಕಿತ್ಸೆ ಬಗ್ಗೆಯೇ ಜನರಲ್ಲಿ ಅನುಮಾನ ಮೂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಮ್‌ಕುಮಾರ್ ವಿಶ್ಲೇಷಿಸುತ್ತಾರೆ.

ಈ ಬಗ್ಗೆ ಮಾಹಿತಿ ಪಡೆಯಲು ಡಿಎಚ್‌ಒ ಡಾ.ನಾಗೇಂದ್ರಪ್ಪ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಮರಣ ವಿಶ್ಲೇಷಣೆ

ಕೋವಿಡ್ ಸಾವಿನ ವಿಶ್ಲೇಷಣೆ ನಡೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಪ್ರತಿಪಾದಿಸಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಸತ್ಯಾಂಶ ಹೊರ ಬರಬಹುದು.

ಕೋವಿಡ್–19 ಎರಡನೇ ಅಲೆ ಆರಂಭವಾದ ನಂತರ ಸಂಭವಿಸಿದ ಸಾವು, ಅದಕ್ಕೆ ಕಾರಣ, ಚಿಕಿತ್ಸೆಯಲ್ಲಿನ ಲೋಪ ಮೊದಲಾದ ವಿಚಾರಗಳನ್ನು ‘ಡೆತ್ ಆಡಿಟಿಂಗ್’ನಲ್ಲಿ ವಿಶ್ಲೇಷಣೆ ಮಾಡಬೇಕಿದೆ. ಈ ಸಂದರ್ಭದಲ್ಲಿ ಆಗಿರುವ ಲೋಪದೋಷಗಳನ್ನು ಪಟ್ಟಿ ಮಾಡಬೇಕಿದೆ. ಅಧಿಕಾರಿಗಳು, ವೈದ್ಯರಷ್ಟೇ ಅಲ್ಲದೆ ಇತರೆ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ‘ಮರಣ ವಿಶ್ಲೇಷಣೆ’ ಮಾಡಬೇಕು. ಆ ವರದಿಯನ್ನು ಬಹಿರಂಗಪಡಿಸಬೇಕು. ಆಗ ಮಾತ್ರ ವಸ್ತುಸ್ಥಿತಿ ಸಮಾಜಕ್ಕೆ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT