ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣ ಪ್ರಗತಿಗೆ ₹50 ಕೋಟಿ: ಸಂಸದ ಜಿ.ಎಸ್.ಬಸವರಾಜು

Published 27 ಫೆಬ್ರುವರಿ 2024, 5:21 IST
Last Updated 27 ಫೆಬ್ರುವರಿ 2024, 5:21 IST
ಅಕ್ಷರ ಗಾತ್ರ

ತುಮಕೂರು: ‘ಅಮೃತ್ ಭಾರತ್’ ಯೋಜನೆಯಡಿ ತುಮಕೂರು, ತಿಪಟೂರು ರೈಲು ನಿಲ್ದಾಣಗಳ ಅಭಿವೃದ್ಧಿಗೆ ₹50 ಕೋಟಿ ಹಣ ಬಿಡುಗಡೆಯಾಗಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ದೇಶದ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿ, ರಸ್ತೆ ಮೇಲು ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಿದ ನಂತರ ನಗರದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಮಕೂರು ನಗರ ರೈಲು ನಿಲ್ದಾಣ ಅಭಿವೃದ್ಧಿಗೆ ₹20 ಕೋಟಿ, ತಿಪಟೂರು ನಿಲ್ದಾಣಕ್ಕೆ ₹30 ಕೋಟಿ ಸೇರಿ ಒಟ್ಟು 50 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ಲಾಟ್‍ಫಾರ್ಮ್ ವಿಸ್ತರಣೆ, ಎಸ್ಕಲೇಟರ್, ಲಿಫ್ಟ್ ಅಳವಡಿಕೆ, ವಿದ್ಯುತ್, ಟಿಕೆಟ್ ಬುಕಿಂಗ್ ಕೌಂಟರ್, ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ, ವಿಐಪಿ ಲಾಂಜ್, ನಿರೀಕ್ಷಣಾ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ನಿಲ್ದಾಣಕ್ಕೆ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ಕಳೆದ ಒಂದು ದಶಕದ ಅವಧಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಅಗಾಧ ಎನ್ನುವಂತಹ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ರೈಲ್ವೆಯ ಆಧುನೀಕರಣಕ್ಕೆ ಒತ್ತು ನೀಡಿದ್ದಾರೆ’ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯ ಉನ್ನತೀಕರಣ, ವಾಯು ಹಾಗೂ ಜಲ ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಸಾರಿಗೆ ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಿದರೆ ನಾಡು ಅಭಿವೃದ್ಧಿಯಾಗಲಿದೆ ಎಂಬ ನಂಬಿಕೆ ಮೇಲೆ ಮೋದಿ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್, ‘ಕೇಂದ್ರದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 25,000 ಕಿ.ಮೀ ರೈಲು ಮಾರ್ಗ ನಿರ್ಮಿಸಲಾಗಿದೆ. ಶೇ 94ರಷ್ಟು ಡೀಸೆಲ್ ರೈಲುಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಮಾನವ ರಹಿತ ಕ್ರಾಸಿಂಗ್‍ಗೆ ಆದ್ಯತೆ ನೀಡಿದ್ದು, ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ವಿನ್ಯಾಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ರೈಲ್ವೇ ವಿಭಾಗೀಯ ಮ್ಯಾನೇಜರ್ ನಿವೇದ್ ತಾಲಿಮ್ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT