ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 40 ದಿನಗಳಲ್ಲಿ 523 ದೂರು

Last Updated 10 ಡಿಸೆಂಬರ್ 2020, 5:23 IST
ಅಕ್ಷರ ಗಾತ್ರ

ತುಮಕೂರು: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮತ್ತು ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ದೃಷ್ಟಿಯಿಂದ ಜಿಲ್ಲೆಗೆ ಹೊಸದಾಗಿ ಬಂದಿರುವ ‘ಹೊಯ್ಸಳ’ ವಾಹನಗಳು ದುರ್ಘಟನೆಗಳು ನಡೆದ ಸ್ವಲ್ಪ ಹೊತ್ತಿಗೆ ಸ್ಥಳಕ್ಕೆ ತಲುಪುವ ಮೂಲಕ ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಬಲ ನೀಡಿವೆ. ಹೊಯ್ಸಳ ಪಡೆಯ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಅಲ್ಲದೆ ಈ ಹೊಯ್ಸಳ ಪಡೆಯ ಕಾರ್ಯಕ್ಷಮತೆಯ ಬಗ್ಗೆ ಜನರಲ್ಲಿ ನಂಬಿಕೆಗಳು ಮೂಡುತ್ತಿವೆ. ಈ ಕಾರಣದಿಂದಲೇ ‘112’ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ಮೂಲಕ ಕೇವಲ 40 ದಿನಗಳಲ್ಲಿ 523 ದೂರುಗಳು ದಾಖಲಾಗಿವೆ. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ನೆರವು ಅಪೇಕ್ಷಿಸಿ ಅಥವಾ ತುರ್ತು ಸ್ಪಂದನೆ ಕೋರಿ ಬರುತ್ತಿರುವ ದೂರುಗಳು ಸಹ ಹೆಚ್ಚಿವೆ ಎನ್ನುತ್ತದೆ ಜಿಲ್ಲಾ ಪೊಲೀಸ್ ಇಲಾಖೆ.

ಈ ಹಿಂದೆ ಜನರು ‘100’ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ದೂರುಗಳನ್ನು ನೀಡುತ್ತಿದ್ದರು. ಇದರ ನಿರ್ವಹಣೆ ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ನಡೆಯುತ್ತಿತ್ತು. ಈಗ ಕೇಂದ್ರ ಸರ್ಕಾರ ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ ‘112’ ಯೋಜನೆ ಜಾರಿಗೊಳಿಸಿದೆ. ಈ ವ್ಯವಸ್ಥೆಯಡಿ ‘112’ಕ್ಕೆ ಕರೆ ಮಾಡಿದರೆ ಆ ಕರೆ ನೇರವಾಗಿ ಬೆಂಗಳೂರಿನಲ್ಲಿರುವ ಕಂಟ್ರೋಲ್ ರೂಂ ತಲುಪುತ್ತದೆ. ನಂತರ ಆ ದೂರನ್ನು ಜಿಲ್ಲಾ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗುತ್ತದೆ.

ಜಿಲ್ಲಾ ಪೊಲೀಸ್‌ ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣವೇ ಈ ದೂರು ಯಾವ ಸ್ಥಳದಿಂದ ಬಂದಿದೆ, ದುರ್ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎನ್ನುವುದನ್ನು ತಿಳಿದು, ಆ ಸ್ಥಳಕ್ಕೆ ಸಮೀಪದಲ್ಲಿರುವ ಹೊಯ್ಸಳ ಪಡೆಗೆ ಸುದ್ದಿ ಮುಟ್ಟಿಸುವರು. ಹೊಯ್ಸಳ ಪಡೆ ದುರ್ಘಟನೆ ನಡೆದ ಸ್ಥಳಕ್ಕೆ ಗರಿಷ್ಠ 20ರಿಂದ 30 ನಿಮಿಷಗಳಲ್ಲಿ ತೆರಳುತ್ತದೆ! ಕರೆ ಮಾಡಿರುವ ನಂಬರ್ ಕಂಟ್ರೋಲ್ ರೂಂನಲ್ಲಿಯೂ ದಾಖಲಾಗುತ್ತದೆ.

ಇತ್ತೀಚೆಗೆ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸಹ 112ಕ್ಕೆ ಕರೆ ಮಾಡಿ ಕುಣಿಗಲ್ ಬಳಿ ಅಪಘಾತ ನಡೆದಿದ್ದರೆ ಬಗ್ಗೆ ಮಾಹಿತಿ ನೀಡಿದ್ದರು. ಗುಬ್ಬಿ ಬಳಿ ನಡೆದ ಅಪಘಾತ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಹೊಯ್ಸಳ ಪಡೆ ತೆರಳಿತ್ತು. ಅದಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಯ ಪ್ರಾಣ ರಕ್ಷಣೆಗೂ ಕಾರಣವಾಯಿತು. ಇತ್ತೀಚೆಗೆ ನಗರದ ಹೋಂಡಾ ಸೆಂಚುರಿ ಷೋ ರೋಂಗೆ ಬೆಂಕಿ ಬಿದ್ದಿದ್ದರ ಬಗ್ಗೆಯೂ ‘112’ಕ್ಕೆ ಕರೆ ಹೋಗಿತ್ತು. ಹೀಗೆ 112ಕ್ಕೆ ಕರೆ ಮಾಡಿ ದೂರು ನೀಡುತ್ತಿರುವ ಮತ್ತು ಹೊಯ್ಸಳ ಪಡೆ ತಕ್ಷಣ ಸ್ಥಳಕ್ಕೆ ತೆರಳುವ ಪ್ರಸಂಗಗಳು ಜಿಲ್ಲೆಯಲ್ಲಿ ಹಲವು ಇವೆ.

‘112 Tumakuru’ ಎನ್ನುವ ಫೇಸ್‌ಬುಕ್ ಪುಟದ ಮೂಲಕ ಹೊಯ್ಸಳ ಪಡೆಯ ಕಾರ್ಯಗಳ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಹೊಯ್ಸಳ ಪಡೆಯು ಯಾವ ಊರಿನಲ್ಲಿ ಯಾವ ವಿವಾದದ ಕುರಿತು ಭೇಟಿ ನೀಡಿತು ಎನ್ನುವುದನ್ನು ಪ್ರತಿ ದಿನವೂ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನೋಡಿಯೂ ಬಹಳಷ್ಟು ಮಂದಿ ದೂರು ನೀಡಲು ಮುಂದಾಗಿದ್ದಾರೆ ಎನ್ನುತ್ತವೆ ಇಲಾಖೆ ಮೂಲಗಳು.

ದೂರುದಾರರಿಂದ ಮಾಹಿತಿ: ‘ಹೊಯ್ಸಳ ಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆಯೇ ಎನ್ನುವ ಮಾಹಿತಿಯನ್ನು ದೂರುದಾರರಿಂದ ಕಂಟ್ರೋಲ್ ರೂಂ ಸಿಬ್ಬಂದಿ ಪಡೆಯುವರು. ಹೀಗೆ ದೂರುದಾರರಿಂದಲೇ ಫೀಡ್‌ಬ್ಯಾಕ್ ಪಡೆಯುವುದರಿಂದ ಜನರಲ್ಲಿಯೂ ವ್ಯವಸ್ಥೆಯ ಬಗ್ಗೆ ನಂಬಿಕೆಗಳು ಹೆಚ್ಚುತ್ತಿವೆ’ ಎನ್ನುವರು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು.

ಜಿಲ್ಲೆಯ ಎಲ್ಲ ಪೊಲೀಸ್ ವಾಹನಗಳ ಮೇಲೆ, ಕಳ್ಳಂಬೆಳ್ಳ, ಕ್ಯಾತ್ಸಂದ್ರ ಟೋಲ್‌, ತುಮಕೂರು ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳ ಪ್ರಮುಖ ಸ್ಥಳಗಳು, ವೃತ್ತಗಳಲ್ಲಿ 112ಕ್ಕೆ ಕರೆ ಮಾಡುವ ಬಗ್ಗೆ ಪೊಲೀಸರು ಭಿತ್ತಿಪತ್ರಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT