ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಕಳೆದುಕೊಂಡ 56 ಮಕ್ಕಳು

Last Updated 17 ಜೂನ್ 2021, 3:38 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ಸಾಕಷ್ಟು ಸಾವು ನೋವು ತಂದೊಡ್ಡಿದೆ. ಇನ್ನೂ ಅದರ ತೀವ್ರತೆ ಕಡಿಮೆಯಾಗುತ್ತಿಲ್ಲ. ಜಿಲ್ಲೆಯಲ್ಲೂ ಸಾಕಷ್ಟು ಕುಟುಂಬಗಳು ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿದ್ದು, ಅದರಲ್ಲಿ 56 ಮಕ್ಕಳಿಗೆ ತಂದೆ ಇಲ್ಲದೆ ಅನಾಥರಾಗಿದ್ದಾರೆ.

ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡರೆ ಇಡೀ ಕುಟುಂಬ ಬೀದಿಗೆ ಬರುತ್ತದೆ. ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಕೂಲಿನಾಲಿ ಮಾಡಿ ಬದುಕುವವರು, ದಿನದ ದುಡಿಮೆ ನಂಬಿ ಬದುಕು ಕಂಡುಕೊಂಡಿದ್ದ ಮನೆಗಳಲ್ಲಿ ದುಡಿಯುವ ಕೈ ಇಲ್ಲವಾದರೆ ಅಂತಹ ಕುಟುಂಬದ ಸ್ಥಿತಿಯನ್ನು ನೆನಪು ಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ.

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಬಡ ಕುಟುಂಬಗಳು ಈಗ ಅನ್ನ, ಅಕ್ಷರಕ್ಕಾಗಿ ಮತ್ತೊಬ್ಬರ ಬಳಿ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳು ತಂದೆ, ತಾಯಿ ಕಳೆದುಕೊಂಡಿದ್ದಾರೆ. ಅದರಲ್ಲಿ 56 ಮಕ್ಕಳಿಗೆ ತಂದೆಯೇ ಇಲ್ಲವಾಗಿದ್ದು, ಇನ್ನೂ ಕಣ್ಣುಬಿಟ್ಟು ಅಪ್ಪ ಎಂದು ಕರೆಯುವ ಮುನ್ನವೇ ಹಲವರು ಕಣ್ಣು ಮುಚ್ಚಿದ್ದಾರೆ. 1 ವರ್ಷದಿಂದ ಹಿಡಿದು 16 ವರ್ಷದ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. 1ರಿಂದ 5 ವರ್ಷದ ವರೆಗೆ 10 ಹಾಗೂ 6ರಿಂದ 10 ವರ್ಷದ ವರೆಗೆ 27 ಮಕ್ಕಳಿಗೆ ತಂದೆ ಸ್ಥಾನ ತುಂಬುವವರು ಇಲ್ಲವಾಗಿದ್ದಾರೆ. 29 ಹೆಣ್ಣು ಮಕ್ಕಳು ಹಾಗೂ 27 ಗಂಡು ಮಕ್ಕಳು ಇದ್ದಾರೆ.

ಈ ಎಲ್ಲಾ ಮಕ್ಕಳ ಅಪ್ಪಂದಿರು ಪ್ರತಿ ದಿನವೂ ಕೂಲಿಮಾಡಿ ಕುಟುಂಬ ಸಾಕುತ್ತಿದ್ದರು. ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ, ಕೈಗಾರಿಕೆಗಳಲ್ಲಿ ಕೂಲಿಯವರಾಗಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಂದ ದುಡಿಮೆಯಲ್ಲಿ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈಗ ಅಂತಹ ಮಕ್ಕಳಿಗೆ ಹಾಗೂ ತಾಯಂದಿರಿಗೆ ದಿಕ್ಕು ತೋಚದಂತಾಗಿದ್ದು, ಸಂಸಾರ ಭಾರವೆನಿಸಿದೆ. ಮಕ್ಕಳ ಪಾಲನೆ, ಪೋಷಣೆ ಮಾಡಲು, ಅಕ್ಷರ ಕಲಿಸಲು ನೆರವು ಕೇಳುವಂತಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಂದೆ, ತಾಯಿ ಕಳೆದುಕೊಂಡ ಕುಟುಂಬಗಳ ಪಟ್ಟಿಯನ್ನು ತಯಾರಿಸಿದ್ದು, ಈ ಎಲ್ಲಾ ಕುಟುಂಬಗಳು ಕಡುಬಡತನದಲ್ಲೇ ಜೀವಿಸುತ್ತಿರುವುದು ಪತ್ತೆಯಾಗಿದೆ. ನೆರವಿಗಾಗಿ ಸರ್ಕಾರದತ್ತ ಎದುರು ನೋಡುತ್ತಿವೆ. ಕೋವಿಡ್‌ನಿಂದ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳ ನೆರವಿಗೆ ಸರ್ಕಾರ ಮುಂದಾಗಿದೆ. ಆದರೆ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ ಯಾವುದೇ ನೆರವು ನೀಡುತ್ತಿಲ್ಲ.

ಈ ಕುಟುಂಬಗಳಿಗೆ ಕನಿಷ್ಠ ಶಿಕ್ಷಣ ಕೊಡಿಸುವ ಶಕ್ತಿಯೂ ಇಲ್ಲವಾಗಿದ್ದು, ಪಾಲನೆ ಹೊಣೆ ಹೊತ್ತಿರುವ ತಾಯಂದಿರೇ ದುಡಿದು ಮಕ್ಕಳನ್ನು ಪೋಷಿಸಬೇಕಿದೆ. ಸರ್ಕಾರ ನೆರವಿಗೆ ಬಾರದಿದ್ದರೆ ಮಕ್ಕಳು ಬಾಲ ಕಾರ್ಮಿಕರಾಗುವ ಅಪಾಯ ಕಾದಿದೆ.

ದಾಖಲಿಸಲಾಗುತ್ತಿದೆ: ಒಬ್ಬರು ಪೋಷಕರು ಇರುವ ಮಕ್ಕಳ ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT