ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮ ಸಮಾಜ ನಿರ್ಮಿಸಿದ ಅರಸು

Published 21 ಫೆಬ್ರುವರಿ 2024, 4:53 IST
Last Updated 21 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ತುಮಕೂರು: ಶೋಷಿತ ಸಮುದಾಯಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಸಮಾನತೆಯ ಸಮಾಜ ನಿರ್ಮಿಸುವಲ್ಲಿ ಡಿ.ದೇವರಾಜ ಅರಸು ಪಾತ್ರ ದೊಡ್ಡದು ಎಂದು ಕುವೆಂಪು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಜೆ.ಎಸ್.ಸದಾನಂದ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯ ಡಿ.ದೇವರಾಜ ಅರಸು ಅಧ್ಯಯನ ಪೀಠ ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ಮತ್ತು ಆರ್ಥಿಕ ಒಳಿತಿಗಾಗಿ ರಾಜಕೀಯ– ದೇವರಾಜ ಅರಸು ಒಂದು ಪ್ರಯೋಗ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿ ‘ಉಳುವವನೆ ಭೂಮಿಯ ಒಡೆಯ’ನೆಂದು ಘೋಷಿಸಿ ಭೂ ರಹಿತರಿಗೆ ಭೂಮಿ ಕೊಟ್ಟ ಸಾಧಕ ಎಂದು ಬಣ್ಣಿಸಿದರು.

ಶಿಕ್ಷಣ ಪಡೆಯಲು ಇದ್ದಂತಹ ಮೇಲು- ಕೀಳು ಪದ್ಧತಿಯನ್ನು ನಿಷೇಧಿಸಿ, ಬಡವರಿಗಾಗಿ ಮೀಸಲಾತಿ ಜಾರಿಗೊಳಿಸಿದರು. ಮಲ ಹೊರುವ, ಜೀತದಾಳು ಪದ್ಧತಿ ನಿಷೇಧಿಸಿದರು. ರೈತರ ಮಕ್ಕಳು ಭೂಮಿ ತಾಯಿ ಮಕ್ಕಳೆಂದು ಘೋಷಿಸಿ, ಕನಿಷ್ಠ ಕೂಲಿ ಜಾರಿಗೊಳಿಸಿದರು. ಸಾಮಾನ್ಯ ವರ್ಗದವರಿಗೆ ನ್ಯಾಯಬೆಲೆ ಅಂಗಡಿ, ವಿದ್ಯಾರ್ಥಿಗಳಿಗೆ ಬಸ್‍ ಪಾಸ್, ಹಳ್ಳಿಗಳಿಗೆ ಕುಡಿಯುವ ನೀರು, ಕಾರ್ಮಿಕ ವರ್ಗಕ್ಕೆ ಆರ್ಥಿಕ ಭದ್ರತೆಯನ್ನು ತಂದುಕೊಟ್ಟವರು ಎಂದು ಹೇಳಿದರು.

ಸೂರಿಲ್ಲದ ಹಿಂದುಳಿದ ವರ್ಗದ ಜನರಿಗೆ ಮನೆ ಕಟ್ಟಿಸಿಕೊಡುವ ಯೋಜನೆಯನ್ನು ಜಾರಿಗೆ ತಂದ ಮೊದಲ ಮುಖ್ಯಮಂತ್ರಿ. ಎರಡು ಬಾರಿ ಮುಖ್ಯಮಂತ್ರಿಯಾದ ಅರಸು, ಅಂದಿನ ರಾಜಕೀಯ ಪರಿಸ್ಥಿತಿಯನ್ನು ಸಕಾರಾತ್ಮಕ ದಿಕ್ಕಿನೆಡೆಗೆ ಕೊಂಡೊಯ್ದು, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದರು. ಇಂದಿರಾ ಗಾಂಧಿ ಜಾರಿಗೊಳಿಸಿದ್ದ ಅಭಿವೃದ್ಧಿಯ 20 ಅಂಶಗಳನ್ನು ರಾಜ್ಯದಲ್ಲಿ ಮೊದಲು ಅಳವಡಿಸಿಕೊಂಡು ಜಾರಿ ಮಾಡಿದರು ಎಂದು ನೆನಪಿಸಿಕೊಂಡರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಡಿ.ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕ ಗುಂಡೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT