ಬುಧವಾರ, ಜುಲೈ 28, 2021
23 °C

ತಿಪಟೂರು: ಕೊಬ್ಬರಿ ಬೆಲೆ ಹೆಚ್ಚಳಕ್ಕಾಗಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕೊಬ್ಬರಿ ಬೆಲೆ ಗಣನೀಯವಾಗಿ ಕಡಿಮೆಯಾಗಿ ಬೆಂಬಲ ಬೆಲೆಗಿಂತಲೂ ಕುಸಿತ ಕಂಡಿದೆ. ಬೆಲೆ ಹೆಚ್ಚಳಕ್ಕಾಗಿ ತಿಪಟೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ, ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಿಂಚಿತ್ತೂ ಕಾಳಜಿವಹಿಸುತ್ತಿಲ್ಲ. ಕೊಬ್ಬರಿ ಬೆಲೆ ಬೆಂಬಲ ಬೆಲೆಗಿಂತ ಕಡಿಮೆಯಾದರೆ ನಾಫೆಡ್ ಮೂಲಕ ಖರೀದಿಸಲು ಮುಂದಾಗಬೇಕು. ಆದರೆ, ಸರ್ಕಾರ ನಾಫೆಡ್ ತೆರೆಯುವಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದರು.

ಕೆಲ ಜನಪ್ರತಿನಿಧಿಗಳು ಕಾಟಾಚಾ ರಕ್ಕೆ ಮುಖ್ಯಮಂತ್ರಿಗೆ ಮನವಿ ನೀಡಲು ಮುಂದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಹೊರತು ಬೆಲೆ ಹೆಚ್ಚಳಕ್ಕೆ ಒತ್ತಾಯಿಸುವುದೇ ಇಲ್ಲ. ಆದ್ದರಿಂದ ಸರ್ಕಾರ ಗಮನ ಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸ್ಥಳೀಯ  ಸಂಸ್ಥೆಗಳ ಪ್ರತಿನಿಧಿಗಳು, ರೈತರು ಒಳಗೊಂಡಂತೆ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಎಪಿಎಂಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಬಜಗೂರು ಮಂಜುನಾಥ್, ಸದಸ್ಯ ಕಾಂತರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವ ಸ್ವಾಮಿ, ಸದಸ್ಯ ನ್ಯಾಕೇನಹಳ್ಳಿ ಸುರೇಶ್, ಸಿದ್ಧಾಪುರ ಸುರೇಶ್ ಕುಮಾರ್, ಕೆಪಿಸಿಸಿ ಸದಸ್ಯ ಯೋಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.