ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇರಹಳ್ಳಿ | ಶಿಕ್ಷಕರ ಗೊಂದಲ: ವಿದ್ಯಾರ್ಥಿಗಳ ಗೈರು

ಗೇರಹಳ್ಳಿ ಸರ್ಕಾರಿ ಉರ್ದು ಶಾಲೆಯಲ್ಲಿ 18 ವಿದ್ಯಾರ್ಥಿಗಳ ನಿರಂತರ ಗೈರು
Published 13 ನವೆಂಬರ್ 2023, 7:41 IST
Last Updated 13 ನವೆಂಬರ್ 2023, 7:41 IST
ಅಕ್ಷರ ಗಾತ್ರ

ಕೋರ: ಇಲ್ಲಿನ ಗೇರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ತಿಂಗಳಿನಿಂದ 18 ವಿದ್ಯಾರ್ಥಿಗಳು ನಿರಂತರವಾಗಿ ಶಾಲೆಗೆ ಗೈರಾಗಿದ್ದರೂ, ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆತರಲು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗೇರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಹಾಜರಾಗುತ್ತಿದ್ದರು. ಆದರೆ ಕಳೆದ ಕೆಲ ತಿಂಗಳ ಹಿಂದೆ ಶಿಕ್ಷಕರ ನಡುವಿನ ವೈಮನಸ್ಸು ಸೇರಿದಂತೆ ಹಲವು ಕಾರಣಗಳಿಂದ ಇಲ್ಲಿನ ಶಿಕ್ಷಕರೊಬ್ಬರ ವಿರುದ್ಧ ಆರೋಪಗಳು ಕೇಳಿಬಂದಿದ್ದವು.

ಪೋಷಕರು ನೀಡಿದ ದೂರು ಆಧರಿಸಿ ಬಿಇಒ ಒಂದು ಸಮಿತಿ ರಚಿಸಿದ್ದರು. ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿ, ವಿಚಾರಣೆ ನಡೆಸಿ, ಬಿಇಒಗೆ ವರದಿ ಸಲ್ಲಿಸಿದ್ದರು. ವರದಿ ಹಿನ್ನೆಲೆಯಲ್ಲಿ ಪೋಸ್ಕೊ ಕಾಯ್ದೆಯಡಿ ಶಿಕ್ಷಕನನ್ನು ಬಂಧಿಸಲಾಗಿತ್ತು. ಈ ಘಟನೆ ನಡೆದ ನಂತರದ ದಿನಗಳಲ್ಲಿ ದಸರಾ ರಜೆ ಕೂಡ ಇತ್ತು.

ದಸರಾ ರಜೆ ನಂತರ ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಇಲಾಖೆ ನಿಯಮಯದಂತೆ ಏಳು ದಿನ ನಿರಂತರವಾಗಿ ಗೈರಾದ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಪೋಷಕರ ಮನವೊಲಿಸಿ ಮತ್ತೆ ಶಾಲೆಗೆ ಕರೆತರಬೇಕು. ಆದರೆ ಇಲ್ಲಿ ಅದು ಪಾಲನೆಯಾಗಿಲ್ಲ.

ಶಿಕ್ಷಕರ ನಡುವಿನ ಮನಸ್ತಾಪದಿಂದಾಗಿ ಕೆಲ ಪೋಷಕರು ಒಂದು ತಿಂಗಳಿನಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎನ್ನುವ ಆರೋಪವಿದೆ.

‘ವೈಯುಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದು, ಈಗಾಗಲೇ ಅಂತಹ ಮಕ್ಕಳ ಮನೆಗೆ ಭೇಟಿ ನೀಡಿ, ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವಂತೆ ಮನವೊಲಿಸುವ ಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕಿ ನೂರ್‌ಜಾನ್.

ಶಾಲಾ ಸಮಸ್ಯೆ ಬಗ್ಗೆ ಬಿಇಒ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನಾದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಉರ್ದು ಶಾಲೆ ಶಿಕ್ಷಕರ ನಡುವಿನ ಗೊಂದಲ ಬಗೆಹರಿಸಿ ಮಕ್ಕಳ ಕಲಿಕೆಗೆ ಕ್ರಮಕೈಗೊಳ್ಳಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶೇಖ್‌ ಮೌಲಾ
ಶೇಖ್‌ ಮೌಲಾ
ಗೇರಹಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ
ಗೇರಹಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ
ಶಿಕ್ಷಕರ ನಡುವಿನ ಜಗಳಕ್ಕೆ ನಮ್ಮ ಮಕ್ಕಳನ್ನು ಅಲೆಸಲು ನಾವು ಸಿದ್ಧವಿಲ್ಲ. ಶಾಲೆಗೆ ಈಗಾಗಲೇ ಕೆಟ್ಟ ಹೆಸರು ಬರುತ್ತಿದ್ದು ಅಲ್ಲಿ ನಮ್ಮ ಮಕ್ಕಳು ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮೊದಲು ಶಿಕ್ಷಕರ ಆಂತರಿಕ ಸಮಸ್ಯೆ ಬಗೆಹರಿಸಲಿ.
ತಕೀ ಬೇಗ್‌ ಪೋಷಕರು
ಶಿಕ್ಷಕರನ್ನು ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ಶಿಕ್ಷಕರನ್ನು ಬದಲಾಯಿಸುವ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಿ.
ಶೇಖ್‌ ಮೌಲಾ ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT