ಶನಿವಾರ, ಸೆಪ್ಟೆಂಬರ್ 21, 2019
24 °C
ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶ

ಪ್ರಯಾಣಿಕರ ಸಾಗಿಸುವ ಸರಕು ವಾಹನ ವಿರುದ್ಧ ಕ್ರಮ

Published:
Updated:
Prajavani

ತುಮಕೂರು: ‘ಜಿಲ್ಲೆಯಲ್ಲಿ ಟ್ರಾಕ್ಟರ್, ಟೆಂಪೊ, ಲಗೇಜು ಆಟೋ ಸೇರಿದಂತೆ ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ವಾಹನ ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅವರು ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸರಕುಗಳನ್ನು ಸಾಗಿಸುವುದಕ್ಕಾಗಿಯೇ ಬಳಸಬೇಕಾದ ಟೆಂಪೋ, ಲಗೇಜು ಆಟೋ, ಟ್ರಾಕ್ಟರ್‌ಗಳಲ್ಲಿ ಜನರನ್ನು ಸಾಗಾಟ ಮಾಡಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿರುವ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ಸಾಗಾಟ ಮಾಡುವ ಸರಕು ವಾಹನಗಳನ್ನು ವಶಕ್ಕೆ ಪಡೆದು ಸಾರಿಗೆ ಕಾಯ್ದೆ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಬೇಕು’ ಸಭೆಯಲ್ಲಿ ಹಾಜರಿದ್ದ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದರು.

‘ಸಂತೆ, ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಜನರನ್ನು ಸರಕು ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಾಣಿಕೆ ಮಾಡಲಾಗುತ್ತದೆ. ಅಲ್ಲದೇ, ಸಿದ್ಧ ಉಡುಪು (ಗಾರ್ಮೆಂಟ್ಸ್) ಕಾರ್ಖಾನೆಗಳ ಉದ್ಯೋಗಿಗಳನ್ನು ಹಾಗೂ ಕಟ್ಟಡ ಕಾರ್ಮಿಕರು ಹಾಗೂ ಕೂಲಿಗಳನ್ನು ಸರಕು ಸಾಗಾಣಿಕೆ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಇಂತಹ ವಾಹನಗಳ ವಿರುದ್ಧ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

  ಸಾರ್ವಜನಿಕ ಸಾರಿಗೆ ಸೌಲಭ್ಯ ಇಲ್ಲದಿರುವ ಕಡೆ ಜನರು ಈ ಸರಕು ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂತಹ ಸ್ಥಳಗಳಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್‌ಗಳನ್ನು ಓಡಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.

ಜಿಲ್ಲಾಧಿಕಾರಿಗಳು, ಗಾರ್ಮೆಂರ್ಟ್ಸ್ ಕಂಪನಿಗಳಿಗೆ ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು. ಸರಕು ವಾಹನಗಳಲ್ಲಿ ಕಾರ್ಮಿಕರು, ಉದ್ಯೋಗಸ್ಥರು ಪ್ರಯಾಣಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಕೈಗಾರಿಕಾ  ಇಲಾಖೆ ಜಂಟಿ ನಿರ್ದೇಶಕರಿಗೆ, ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಾಹನ ಚಲಾಯಿಸುವ ಅಪ್ರಾಪ್ತ ಸವಾರರನ್ನು ಪತ್ತೆ ಹಚ್ಚಿ ಆ ವಾಹನದ ಮಾಲೀಕರ ವಿರುದ್ಧವೇ ಪ್ರಕರಣ ದಾಖಲು ಮಾಡಬೇಕು. ಅಲ್ಲದೇ, ವಾಹನದ ಆರ್.ಸಿ.ರದ್ದುಪಡಿಸಬೇಕು.  ಮೊಬೈಲ್ ಬಳಸುವ ಸವಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದರು.

 ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತುಮಕೂರು ನಗರ ಡಿಎಸ್ಪಿ ತಿಪ್ಪೇಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹಾಗೂ ಪೊಲೀಸ್, ಶಿಕ್ಷಣ, ಪಾಲಿಕೆ, ರೈಲ್ವೆ ಇಲಾಖೆಯ ಅಧಿಕಾರಿಗಳಿದ್ದರು.

Post Comments (+)