ಮಂಗಳವಾರ, ಏಪ್ರಿಲ್ 13, 2021
25 °C
ಅಗ್ರೋ ಎಕ್ಸ್‌ಪೋದಲ್ಲಿ ಗಮನ ಸೆಳೆದ ಸಾವಯವ ಔಷಧಿ

ಸಾಗರದ ಕಳೆಸಸ್ಯದಿಂದ ಕೀಟನಾಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸಮುದ್ರದಲ್ಲಿ ಬೆಳೆಯುವ ಕಳೆ ಸಸ್ಯಗಳಿಂದ ತಯಾರಿಸಿದ ಕೀಟನಾಟಕ ಉತ್ಪನ್ನಗಳು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆಯೋಜಿಸಿರುವ ‘ಅಗ್ರೋ ಎಕ್ಸ್‌ಪೋ’ದಲ್ಲಿ ಜನರ ಗಮನ ಸೆಳೆದವು.

ಬೆಳೆನಾಶಕ ಹುಳು–ಹುಪ್ಪಟೆಗಳನ್ನು ಸಂಹಾರ ಮಾಡಿ, ಇಳುವರಿ ಹೆಚ್ಚಳಕ್ಕಾಗಿ ಈ ಉತ್ಪನ್ನಗಳನ್ನು ಸಂಶೋಧಿಸಲಾಗಿದೆ ಎಂದರು ಐಸಿರಿ ಬಯೋಸಲೂಷನ್ಸ್‌ ಕಂಪನಿಯ ಪ್ರತಿನಿಧಿಗಳು.

ಸಾಗರದ ಕಳೆ ಸಸ್ಯಗಳು, ವೈಟೆಕ್ಸ್‌ ನಿಗುಂದ ಸಸ್ಯದ ಎಲೆಗಳು, ಗಿಡ–ಮರಗಳಲ್ಲಿನ ಸಾವಯವ ಅಂಶದಿಂದ ಈ ಔಷಧೋತ್ಪನ್ನ ಸಿದ್ಧಪಡಿಲಾಗುತ್ತದೆ. ಈ ಕೀಟನಾಶಕ ದ್ರಾವಣವನ್ನು ನಿರ್ದಿಷ್ಟ ಅಳತೆಯ ನೀರಿನ ಪ್ರಮಾಣದಲ್ಲಿ ಬೆರೆಸಿ ಎಲ್ಲ ಬೆಳೆಗಳಿಗೆ ಸಿಂಪಡಿಸಬಹುದಾಗಿದೆ ಎಂದು ಕಂಪನಿಯ ಸಂಶೋಧನಾ ವಿಶ್ಲೇಷಕಿ ಧನ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಂಪನಿಯು ದ್ರವರೂಪದ ಹಾಗೂ ಜೆಲ್‌ ರೂಪದ ಕೀಟನಾಶಕಗಳನ್ನು ರೂಪಿಸಿದೆ. ದ್ರವರೂಪದ ಔಷಧಿಯನ್ನು ನೀರಿನೊಂದಿಗೆ, ಜೆಲ್‌ ರೂಪದಲ್ಲಿನ ಔಷಧಿಯನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಬೆರೆಸಿ ಬೆಳೆಗಳ ಬುಡದ ಬದಿ ನೇರವಾಗಿ ಹಾಕಬಹುದು ಎಂದು ಅವರು ಮಾಹಿತಿ ನೀಡಿದರು.

ಐಸಿರಿ ಉತ್ಪನ್ನಗಳು ಥ್ರಿವ್ಸ್‌ ನುಸಿ, ಬಿಳಿ ನೋಣ, ಎಲೆ ತುಕ್ಕು ವೈರಸ್‌, ಎಲೆ ಸುರುಟು ವೈರಸ್‌ಗಳ ಭಾದೆಯನ್ನು ತಡೆಯಲಿವೆ. ಹಣ್ಣು, ತರಕಾರಿ, ಹೂ, ದ್ವಿದಳ ಧಾನ್ಯ, ಟೀ, ಹತ್ತಿ, ಎಣ್ಣೆ ಬೀಜದ ಬೆಳೆಗಳು, ಭತ್ತದ ಬೆಳೆಗಳಿಗೆ ಐಸಿರಿ ಔಷಧಿಗಳನ್ನು ಬಳಸಬಹುದು ಎಂದು ಅವರು ತಿಳಿಸಿದರು.

ಕೀಟನಾಶಕಗಳು ಕನಿಷ್ಠ 100 ಮಿಲಿ ಲೀಟರ್‌ನಿಂದ 5 ಲೀಟರ್‌ ಸಂಗ್ರಹ ಸಾಮರ್ಥ್ಯದ ಬಾಟಲ್‌ ಮತ್ತು ಪ್ಯಾಕ್‌ಗಳಲ್ಲಿ ಲಭ್ಯವಿವೆ ಎಂದರು.

ಔಷಧಿ ಉತ್ಪನ್ನಗಳಲ್ಲಿ ರಾಸಾಯನಿಕ ಬಳಸಿಲ್ಲ. ಸಾವಯವ ಉತ್ಪನ್ನಗಳನ್ನು ಮಾತ್ರ ಮಿಶ್ರಣ ಮಾಡಲಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಫಸಲಿನಲ್ಲಿ ಶೇ 20ರಿಂದ 30ರಷ್ಟು ಪ್ರಮಾಣ ಹೆಚ್ಚಳ ಆಗುತ್ತದೆ. ಈ ಅಂಶ ಕಂಪನಿ ಮಾಡಿದ ಪ್ರಯೋಗಗಳಿಂದ ದೃಢಪಟ್ಟಿದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದಲೂ ಉತ್ಪನ್ನಗಳ ಪರಿಣಾಮದ ಕುರಿತು ಪ್ರಶಂಸೆ ವ್ಯಕ್ತವಾಗಿದೆ ಎಂದು ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಎಸ್‌.ಉಲ್ಲಾಸ್‌ ಹೇಳಿದರು.

ಕಂಪನಿಯು ಐಸಿರಿ ಸಂಹಾರ, ಜವಾನ್‌, ವಿನಾಶ್‌, ಪ್ರಹಾರ ಸೂಪರ್‌, ಶಕ್ತಿ, ಭೂಮಿಕಾ, ವಿಕಾಸ, ಪುಷ್ಪ, ಸೋನಾ, ಭೂ ಚೈತನ್ಯ ಎಂಬ ಹೆಸರುಗಳಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.