ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಅಳಿವಿನಂಚಿನಲ್ಲಿ ಅಕ್ಕ– ತಂಗಿ ಕೆರೆ

90 ಎಕರೆ ವಿಸ್ತೀರ್ಣ, 15 ಎಕರೆಯಲ್ಲಿ ವೃಕ್ಷವನ ನಿರ್ಮಾಣ
ಮೈಲಾರಿ ಲಿಂಗಪ್ಪ
Published 29 ಮೇ 2024, 6:26 IST
Last Updated 29 ಮೇ 2024, 6:26 IST
ಅಕ್ಷರ ಗಾತ್ರ
ನಗರ ಪ್ರದೇಶದ ಜೀವಸೆಲೆಯಾಗಿದ್ದ ಕೆರೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಜಲ ಮೂಲಗಳನ್ನು ಆಪೋಷನ ಪಡೆದು ‘ಕಾಂಕ್ರೀಟ್ ಕಾಡು’ ವಿಸ್ತರಿಸುತ್ತಲೇ ಸಾಗಿದೆ. ಕೆರೆಕಟ್ಟೆಗಳು ಲೇಔಟ್‌ಗಳಾಗಿ ಬದಲಾಗುತ್ತಿವೆ. ಇಲ್ಲವೆ ಒತ್ತುವರಿಯಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇಂತಹ ಸ್ಥಿತಿಯಲ್ಲಿ ತುಮಕೂರು ನಗರದ ಕೆರೆಗಳ ಸ್ಥಿತಿಗತಿಯ ಅವಲೋಕನ ಇಂದಿನಿಂದ ಆರಂಭ...

ತುಮಕೂರು: ಒಂದು ಕಾಲದಲ್ಲಿ ಜನರ ದಾಹ ತಣಿಸುತ್ತಿದ್ದ, ಪಶು, ಪಕ್ಷಿಗಳ ನೆಚ್ಚಿನ ತಾಣವಾಗಿದ್ದ ಅಕ್ಕ ತಂಗಿ ಕೆರೆ ಈಗ ಅಳಿವಿನಂಚಿಗೆ ಸಾಗಿದೆ.

ನಗರದ ವಿದ್ಯಾನಗರಕ್ಕೆ ಹೊಂದಿಕೊಂಡಂತಿರುವ ಅಕ್ಕ ತಂಗಿ ಕೆರೆ ತನ್ನ ಗತ ವೈಭವ ಕಳೆದುಕೊಂಡಿದೆ. ಈ ಹಿಂದೆ ಎನ್‌.ಆರ್‌.ಕಾಲೊನಿ ಸೇರಿದಂತೆ ಸುತ್ತಮುತ್ತಲಿನ ಜನರ ಕುಡಿಯುವ ನೀರಿನ ಮೂಲವಾಗಿದ್ದ ಕೆರೆ ಇದೀಗ ಅವನತಿಯತ್ತ ಹೊರಳುತ್ತಿದೆ. 90.32 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ನಾಲ್ಕೈದು ಎಕರೆ ಒತ್ತುವರಿಯಾಗಿದೆ. ಕೆರೆಯ ಒಂದಷ್ಟು ಪ್ರದೇಶ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೂ ಬಳಕೆಯಾಗಿದೆ.

ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳು ಆಶ್ರಯ ಪಡೆಯುತ್ತಿದ್ದವು. ಒಂದು ಕಾಲದಲ್ಲಿ ತುಂಬಾ ಪ್ರಖ್ಯಾತಿ ಪಡೆದಿದ್ದ ಕೆರೆ ಇದೀಗ ನಗರೀಕರಣದ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ನಗರದ ಅಭಿವೃದ್ಧಿ, ಜನರ ಅತಿಯಾಸೆ, ಅಧಿಕಾರಿಗಳಿಗೆ ಮುನ್ನೋಟ ಇಲ್ಲದೆ ರೂಪಿಸಿದ ಯೋಜನೆಗಳಿಂದ ಕೆರೆಯ ನೀರಿನ ಮೂಲಗಳು ನಶಿಸುತ್ತಿವೆ.

ಮಳೆ ನೀರಿನಿಂದ ತುಂಬಿಕೊಳ್ಳುತ್ತಿದ್ದ ಕೆರೆಯನ್ನು ಈಗ ತ್ಯಾಜ್ಯ ಆವರಿಸಿಕೊಂಡಿದ್ದು, ಸಂಪೂರ್ಣ ಕಲುಷಿತಗೊಂಡಿದೆ. ಏರಿಯ ಮೇಲೆ ಕಸ ಸುರಿಯುವುದು ಮುಂದುವರಿದಿದೆ. ಇಲ್ಲಿಂದ ಅಮಾನಿಕೆರೆಗೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗುತ್ತಿದ್ದು, ತ್ಯಾಜ್ಯದ ಹರಿವಿಗೆ ನಿಯಂತ್ರಣ ಇಲ್ಲವಾಗಿದೆ.

ಮಹಾನಗರ ಪಾಲಿಕೆಯಿಂದ ಕೆರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅರಣ್ಯ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ 15 ಎಕರೆಯಲ್ಲಿ ವೃಕ್ಷ ವನ ನಿರ್ಮಿಸಲಾಗಿದೆ. ‘ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ’ ಎಂದು ನಾಮಕರಣ ಮಾಡಿದೆ. ‘ವೃಕ್ಷವನದಲ್ಲಿ ಒಂದೇ ಜಾತಿಗೆ ಸೇರಿದ ಮರಗಳನ್ನು ಬೆಳೆಸಿದ್ದು, ಇದರಿಂದ ಕೆರೆಯ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ’ ಎಂಬುವುದು ಪರಿಸರ ಪ್ರೇಮಿಗಳ ಆರೋಪ.

ಉದ್ಯಾನದಲ್ಲಿ ಮಕ್ಕಳ ಆಟೋಟಕ್ಕೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಉದ್ಯಾನದ ಬಳಿ ಯಾವುದೇ ಕಾವಲುಗಾರರನ್ನು ನೇಮಿಸಿಲ್ಲ. ಇದರಿಂದ ಯಾರು, ಯಾವಾಗ ಬೇಕಾದರೂ ಪ್ರವೇಶ ಪಡೆಯಬಹುದಾಗಿದೆ. ಉದ್ಯಾನವನ ಯುವಕ- ಯುವತಿಯರ, ಪ್ರೇಮಿಗಳ ತಾಣವಾಗಿ ಬದಲಾಗಿದೆ.

ಮೋಜು ಮಸ್ತಿಗಾಗಿ ಕೆರೆ ಅಂಗಳ ಬಳಕೆಯಾಗುತ್ತಿದೆ. ನಗರದ ಹೊರ ವಲಯದಲ್ಲಿ ಇರುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿದ್ದು, ಮೊದಲು ಇದಕ್ಕೆ ಕಡಿವಾಣ ಹಾಕಬೇಕಿದೆ. ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಯ ರಕ್ಷಣೆಗೆ ಯೋಜನೆ ರೂಪಿಸಬೇಕಿದೆ.

ತುಮಕೂರಿನ ಅಕ್ಕ ತಂಗಿ ಕೆರೆಯ ಭಾಗದಲ್ಲಿ ನಿರ್ಮಿಸಿರುವ ವೃಕ್ಷವನ
ತುಮಕೂರಿನ ಅಕ್ಕ ತಂಗಿ ಕೆರೆಯ ಭಾಗದಲ್ಲಿ ನಿರ್ಮಿಸಿರುವ ವೃಕ್ಷವನ
ಜಿ.ವಿ.ಆನಂದಮೂರ್ತಿ
ಜಿ.ವಿ.ಆನಂದಮೂರ್ತಿ

ನಗರೀಕರಣ ತಡೆಯಬೇಕು

ನಗರ ಅಭಿವೃದ್ಧಿಯಾದಂತೆ ನೀರಿನ ಮೂಲಗಳು ನಶಿಸುತ್ತವೆ. ಅಕ್ಕತಂಗಿ ಕೆರೆ ಒಂದು ಕಾಲದಲ್ಲಿ ತುಂಬಾ ಪ್ರಖ್ಯಾತಿ ಪಡೆದಿತ್ತು. ಯಾವುದೇ ಮುಂದಾಲೋಚನೆ ಇಲ್ಲದೆ ಯೋಜನೆಗಳನ್ನು ರೂಪಿಸುವುದರಿಂದ ಕೆರೆ ಹಾಳಾಗುತ್ತಿದೆ ಎಂದು ಲೇಖಕ ವನ್ಯಜೀವಿ ಛಾಯಾಗ್ರಾಹಕ ಜಿ.ವಿ.ಆನಂದಮೂರ್ತಿ ಆತಂಕ ವ್ಯಕ್ತಪಡಿಸಿದರು. ಪಕ್ಷಿಗಳಿಗೆ ನೆಚ್ಚಿನ ತಾಣವಾಗಿದ್ದ ಅಕ್ಕತಂಗಿ ಕೆರೆ ಒತ್ತುವರಿಯಿಂದ ವಿಸ್ತೀರ್ಣ ಕಡಿಮೆಯಾಗಿದೆ. ಕೆರೆಯಲ್ಲಿ ಹಲವು ಕಟ್ಟಡಗಳು ತಲೆ ಎತ್ತಿವೆ. ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈಗಿರುವ ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಕೆರೆ ರಕ್ಷಣೆಗೆ ಸಲಹೆ

* ಕೆರೆ ಏರಿ ಸ್ವಚ್ಛಗೊಳಿಸುವುದು

* ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಹೊರ ಹಾಕುವುದು

* ಉದ್ಯಾನವನಕ್ಕೆ ಅತಿಕ್ರಮ ಪ್ರವೇಶ ತಡೆಯುವುದು

* ರಕ್ಷಣೆಗೆ ಕಾವಲುಗಾರರನ್ನು ನಿಯೋಜಿಸುವುದು

* ಕೆರೆಗೆ ಕಸ ಸುರಿಯುವುದನ್ನು ತಪ್ಪಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT