ಮಂಗಳವಾರ, ಜುಲೈ 5, 2022
21 °C

ಅಮೃತ ವಸತಿ ಯೋಜನೆ: ಎಲ್ಲರಿಗೂ ಸೂರು- ಸಚಿವ ಬಿ.ಸಿ.ನಾಗೇಶ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ದೇಶದ ಪ್ರತಿಯೊಬ್ಬರಿಗೂ 2022ರ ಒಳಗಾಗಿ ಸೂರು ಕಲ್ಪಿಸುವ ಸಲುವಾಗಿ ಅಮೃತ ವಸತಿ ಯೋಜನೆ ಜಾರಿಗೆ ತರಲಾಗಿದೆ.  ರಾಜ್ಯದಲ್ಲಿಯೂ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಂದಣಿ ಪ್ರಾರಂಭವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಗೊಂಡನಹಳ್ಳಿಯಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆಯಲ್ಲಿ ಅಮೃತ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ, ಅರ್ಜಿ ಸ್ವೀಕೃತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುಮಾರು 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿನ ಎಲ್ಲ ಗ್ರಾಮಗಳ ಪ್ರತಿ ಕುಟುಂಬವೂ ವಸತಿ ರಹಿತವಾಗಿರದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ಯಾರಿಗೆ ನಿವೇಶನಗಳಿವೆ ಅಂತಹವರಿಗೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಒಂದು ವೇಳೆ ಜಮೀನು ಮಾತ್ರ ಇದ್ದರೂ ಅದರಲ್ಲಿಯೂ ಮನೆ ಕಟ್ಟಲು ಅಗತ್ಯವಿರುವ ದಾಖಲೆ ಒದಗಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು.

ತಾಲ್ಲೂಕಿನಲ್ಲಿ ಮೊದಲಿಗೆ 5 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ್ದು, 5 ವರ್ಷದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಹಂತ ಹಂತವಾಗಿ ಮನೆ ನಿರ್ಮಿಸಲಾಗುವುದು ಎಂದರು.

ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಸಭೆಗಳ ಮಹತ್ವ ಅತ್ಯಮೂಲ್ಯ. ಈ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ವಸತಿ ಕೊಡಿಸಲು ಯತ್ನಿಸಲಾಗುವುದು ಎಂದು ತಿಳಿಸಿದರು.

ಹುಚ್ಚಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಡಿ.ಧನಲಕ್ಷ್ಮೀ ಮಾತನಾಡಿ, ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ವಸತಿ ರಹಿತ ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಪ್ರತಿಯೊಬ್ಬರು ಯೋಜನೆಯ ಸದುಪಯೋಗಕ್ಕೆ ಸಹಕಾರ ನೀಡಬೇಕಿದೆ
ಎಂದರು.

ವಸತಿ ರಹಿತ ಆಕಾಂಕ್ಷಿಗಳಿಂದ ಗ್ರಾಮಸಭೆಯಲ್ಲಿ ಸಚಿವ ಬಿ.ಸಿ.ನಾಗೇಶ್ ಅರ್ಜಿ ಸ್ವೀಕರಿಸಿದರು. ಉಪಾಧ್ಯಕ್ಷೆ ರೂಪ, ಸದಸ್ಯರಾದ ಓಂಕಾರಸ್ವಾಮಿ, ಶಿವಗಂಗಾ, ಗೀತಾ, ಶಿವಕುಮಾರ್, ಸುಧಾಮಣಿ, ಶಿವಸ್ವಾಮಿ ಈ.ಎನ್., ಕಲಾವತಿ ಎಚ್.ಎಂ., ಮಮತಾ ಎಸ್.ಕೆ., ಸಾವಿತ್ರಮ್ಮ, ನರಸಿಂಹಯ್ಯ, ಬಸವರಾಜು, ಕಲ್ಯಾಣಮ್ಮ, ಜಗನ್ನಾಥ್ ಕೆ.ಬಿ., ಎಚ್.ಎಲ್.ಪ್ರಕಾಶ್, ಸೋಮಶೇಖರ್, ನಿರ್ಮಲಾ, ಗಂಗಾಧರ್, ಆರ್.ಎಸ್.ಶಂಕರಪ್ಪ, ಅಣ್ಣಯ್ಯ, ವಿಜಯಲಕ್ಷ್ಮೀ, ಪಿಡಿಒ ಎಚ್.ಆರ್.ಶಿವಕುಮಾರ್, ದ್ವಿತಿಯ ದರ್ಜೆ ಸಹಾಯಕ ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು