ಶನಿವಾರ, ಜೂನ್ 25, 2022
24 °C

ಮಾನವೀಯತೆ ಮೆರೆದ ಆಂಬುಲೆನ್ಸ್ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆಂಬುಲೆನ್ಸ್ ಚಾಲಕ ಯೋಗೀಶ್ ತನ್ನ ಪ್ರಾಣದ ಹಂಗು ತೊರೆದು ಕೊರೊನಾ ಸೋಂಕಿತ ಮಹಿಳೆಯನ್ನು ಆಂಬುಲೆನ್ಸ್ ಬಳಿಗೆ ಎತ್ತಿಕೊಂಡು ಬಂದು, ಬಳಿಕ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೆಂಟರ್‌ನಲ್ಲಿ ದಾಖಲಾಗಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಅವರನ್ನು ಅಲ್ಲಿ ಕೇಳುವವರು ಯಾರು ಇಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿದ್ದು, ಅಲ್ಲಿನ ಅವ್ಯವಸ್ಥೆಗೆ ಈ ಘಟನೆ ಕನ್ನಡಿ ಹಿಡಿದಂತಾಗಿದೆ.

ಮಾಜಿ ಸಚಿವ ಟಿ.ಬಿ. ಜಯಚಂದ್ರ ನೀಡಿರುವ ಆಂಬುಲೆನ್ಸ್ ಚಾಲಕ ರೋಗಿಯನ್ನು ಎತ್ತಿಕೊಂಡು ಬರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋವಿಡ್ ಕೇರ್‌ ಸೆಂಟರ್‌ನಲ್ಲಿ ದಾಖಲಾಗಿದ್ದ ಮಹಿಳೆಗೆ ವಾಂತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಬಂದಿತ್ತು. ಮೊದಲನೆ ಮಹಡಿಯಲ್ಲಿದ್ದ ರೋಗಿಯನ್ನು ಆಂಬುಲೆನ್ಸ್ ಬಳಿಗೆ ಕರೆತರುವವರು ಯಾರು ಇಲ್ಲದೆ ಮಹಿಳೆ ಮೇಲೆ ಏಳಲು‌ ಸಾಧ್ಯವಾಗದೆ ಕಷ್ಟಪಡುತ್ತಿದ್ದರು. ಈ ಸಮಯದಲ್ಲಿ‌ ಚಾಲಕ ಯೋಗೀಶ್ ಎತ್ತಿಕೊಂಡು ಬಂದು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ.

ರೋಗಿಯನ್ನು ಎತ್ತಿಕೊಂಡು ಬರುತ್ತಿದ್ದರೂ ಕೇಳುವವರು ಅಲ್ಲಿ ಯಾರು ಇರಲಿಲ್ಲ. ಮೇಲಿನಿಂದ ಕೆಳಕ್ಕೆ ರೋಗಿಯನ್ನು ಕರೆತರಲು ಒಂದು ಸ್ಟ್ರಚ್ಚರ್ ಇಲ್ಲದಿರುವುದು ಸೋಜಿಗ ಮೂಡಿಸುತ್ತಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಚಾಲಕ ಯೋಗೀಶ್, ‘ಕೊರೊನಾದಿಂದ ನನ್ನ ಮಾವನನ್ನು ಕಳೆದುಕೊಂಡಿದ್ದೇನೆ. ನಮಗೆ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ. ನಮ್ಮ ಪರಿಸ್ಥಿತಿ ಬೇರೆಯವರಿಗೆ ಬೇಡ. ಎಲ್ಲರೂ ಒಂದು ದಿನ ಸಾಯುವುದು ಖಚಿತ. ಈ ಸಮಯದಲ್ಲಿ ನಾವು ಮಾಡಿದ ಒಳ್ಳೆಯ ಕೆಲಸ ಮುಖ್ಯವಾಗುತ್ತದೆ. ಇಂದು ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. ಜಯಚಂದ್ರ ಅವರು ಉಚಿತವಾಗಿ ಅಂಬುಲೆನ್ಸ್ ನೀಡಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು