ಭಾನುವಾರ, ಜುಲೈ 25, 2021
22 °C
ಶಿವಕುಮಾರ ಸ್ವಾಮೀಜಿ ವೃತ್ತದಿಂದ ಗಾಜಿನಮನೆವರೆಗೆ ಇರುವ ಸೋಲಾರ್‌ ಲೈಟ್‌ಗಳು

ತುಮಕೂರು: ಬೆಳಕು ನೀಡದ ಸೋಲಾರ್‌ ದೀಪ

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ರಸ್ತೆಗಳಲ್ಲಿ ನಗರಪಾಲಿಕೆಯಿಂದ ಹಾಕಿರುವ ಸೋಲಾರ್ ದೀಪಗಳು ಉರಿಯದೆ ಕತ್ತಲು ಆವರಿಸಿದೆ.

ನಗರದ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಅಮಾನಿಕೆರೆ ವರೆಗೆ ರಸ್ತೆ ವಿಭಜಕದ ಮಧ್ಯದಲ್ಲಿ 120 ಸೋಲಾರ್‌ ವಿದ್ಯುತ್ ಕಂಬಗಳನ್ನು ನಗರಪಾಲಿಕೆ 2011ರಲ್ಲಿ ಅಳವಡಿಸಿದೆ. ಇದೀಗ ಈ ಸೋಲಾರ್‌ ದೀಪಗಳು ಉರಿಯುತ್ತಿಲ್ಲ. ಕೊನೆಗೆ ಸೋಲಾರ್‌ ಕಂಬಗಳು ಮತ್ತು ಪ್ಯಾನಲ್‌ಗಳು ಮಾತ್ರ ಉಳಿದುಕೊಂಡಿವೆ.

ಬಹಳಷ್ಟು ಕಂಬಗಳು ಶಿಥಿಲಗೊಂಡು ರಸ್ತೆಗೆ ಬಾಗಿ ನಿಂತಿವೆ. ಕೆಲವು ಮುರಿದು ಬೀಳುವ ಸ್ಥಿತಿಯಲ್ಲಿವೆ. ಬ್ಯಾಟರಿ ಇಲ್ಲದೆ, ಮುರಿದ ಕಂಬಗಳಲ್ಲಿ ಅಲ್ಲಲ್ಲಿ ಪ್ಯಾನಲ್‌ಗಳು ನೇತಾಡುತ್ತಿರುವುದು ಕಾಣಸಿಗುತ್ತದೆ. ಕಂಬಗಳಿಗೆ ಮುಳ್ಳಿನ ತಂತಿಗಳನ್ನು ಅಳವಡಿಸಿದ್ದರೂ ಬ್ಯಾಟರಿಗಳು ಕಾಣೆಯಾಗಿವೆ.

ಬ್ಯಾಟರಿ ಹೊತ್ತೊಯ್ದರು: ನಗರದಲ್ಲಿ ಅಳವಡಿಸಿರುವ ಸೋಲಾರ್‌ ವಿದ್ಯುತ್ ಕಂಬಗಳಿಂದ ಬ್ಯಾಟರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಬಹುತೇಕ ಕಂಬಗಳಲ್ಲಿ ಬ್ಯಾಟರಿಗಳೇ ಇಲ್ಲ. ಈ ಬ್ಯಾಟರಿಗಳು ಸಾಕಷ್ಟು ಬೆಲೆ ಬಾಳುತ್ತವೆ. ಇವುಗಳನ್ನು ಮನೆಬಳಕೆಗೆ, ಆಟೊರಿಕ್ಷಾಗಳಿಗೆ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಸುಲಭವಾಗಿ ಸಿಗುವುದರಿಂದ ಕದ್ದೊಯ್ಯುತ್ತಾರೆ. ಆದರೆ ಪಾಲಿಕೆ ಅಧಿಕಾರಿಗಳು ತಡೆಯುವ ಪ್ರಯತ್ನ ಮಾಡಿಲ್ಲ. ಸಂರಕ್ಷಿಸುವ ಮಾರ್ಗಗಳನ್ನು ಕಂಡುಕೊಂಡಿಲ್ಲ. ಕೇವಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೈಕಟ್ಟಿ ಕುಳಿತಿದ್ದಾರೆ.

ನಗರಕ್ಕೆ ಬೆಳಕು ನೀಡುವ ಉದ್ದೇಶಕ್ಕಾಗಿ ಸೋಲಾರ್‌ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದರೂ ಪ್ರಸ್ತುತ ಯಾರಿಗೂ ಪ್ರಯೋಜನವಾಗಿಲ್ಲ. ಈಗ ಕಂಬಗಳಷ್ಟೇ ಉಳಿದಿವೆ. ಕಾರ್ಯಕ್ರಮಗಳ ಬಂಟಿಂಗ್ಸ್‌, ಕರಪತ್ರ, ಬ್ಯಾನರ್‌ಗಳನ್ನು ಕಟ್ಟಲು ಬಳಕೆಯಾಗುತ್ತಿವೆ. ಈ ಸೋಲಾರ್‌ ದೀಪಗಳನ್ನು ಬಹಳಷ್ಟು ವರ್ಷಗಳಿಂದ ಯಾರೂ ರಿಪೇರಿ ಮಾಡಿಸಿಲ್ಲ. 120 ಸೋಲಾರ್‌ ಕಂಬಗಳಲ್ಲಿ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಇರುವ ಒಂದು ಕಂಬ ಮಾತ್ರ ಬೆಳಕು ನೀಡುತ್ತಿದೆ. ಉಳಿದವು ದೂಳು, ಜೇಡರ ಬಲೆ ಹಿಡಿದು ತೂಗಾಡುತ್ತಿವೆ. ಕೆಲವು ಕಂಬಗಳ ಬಲ್ಬ್‌ಗಳೇ ಕಾಣೆಯಾಗಿವೆ.

ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದರೂ ಗುಣಮಟ್ಟದ ಸೋಲಾರ್‌ ದೀಪಗಳನ್ನು ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ಬೇಗ ಹಾಳಾಗುತ್ತವೆ ಎಂದು ಇವುಗಳನ್ನು ಅಳವಡಿಸಿದ ಸಮಯದಲ್ಲಿ ನಗರದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಿವಿಗೊಡಲಿಲ್ಲ. ನಂತರ ನಿರ್ವಹಣೆಯನ್ನೂ ಪಾಲಿಕೆ ಅಧಿಕಾರಿಗಳು ಮರೆತರು. ಒಟ್ಟಾರೆ ಜನರ ತೆರಿಗೆ ಹಣ ಪೋಲಾಗುವುದು ಮಾತ್ರ ತಪ್ಪಿಲ್ಲ.

ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿದ್ಯುತ್ ಕಂಬ ಕಳವಡಿಸುವ ಸಮಯದಲ್ಲಾದರೂ ಎಚ್ಚರ ವಹಿಸಿ, ಗುಣಮಟ್ಟ ಕಾಪಾಡಿದರೆ ಮುಂದೆ ಈ ರೀತಿ ಆಗುವುದನ್ನು ತಪ್ಪಿಸಬಹುದಾಗಿದೆ.

ನಿರ್ವಹಣೆ ಮುಖ್ಯ
ಸೋಲಾರ್‌ ದೀಪಗಳು ನೈಸರ್ಗಿಕವಾಗಿ ಕಾರ್ಯನಿರ್ವಹಿಸುವುದರಿಂದ ಆರ್ಥಿಕ ಹೊರೆಯೂ ಕಡಿಮೆ. ಒಮ್ಮೆ ಹಾಕಿದ ನಂತರ ಸರಿಯಾಗಿ ನಿರ್ವಹಣೆ ಮಾಡಿದ್ದರೆ ಇನ್ನೂ ಕೆಲ ವರ್ಷಗಳ ಕಾಲ ಬಾಳಿಕೆ ಬರುತ್ತಿದ್ದವು. ಆದರೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಇದ್ದಾರೆ. ಕೆಲವೆಡೆ ಕಂಬಗಳೇ ಬಿದ್ದು ಹೋಗಿದ್ದು, ಯಾರು ಹೊತ್ತೊಯ್ದಿದ್ದಾರೋ ಗೊತ್ತಿಲ್ಲ. ಸರ್ಕಾರದ ದುಡ್ಡನ್ನು ಬೇಕಾಬಿಟ್ಟಿ ಉಪಯೋಗಿಸುವುದು ಸರಿಯಲ್ಲ. ಜನರಿಗೆ ಉಪಯೋಗ ಆಗುವಂತಹ ಕೆಲಸ ಮಾಡಬೇಕು. ಈಗ ಸೋಲಾರ್‌ ವಿದ್ಯುತ್ ಕಂಬಗಳು ಇದ್ದರೂ ಬೆದರು ಬೊಂಬೆಯಂತಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಕೋತಿತೋಪಿನ ಎಸ್‌.ಬಸವರಾಜ್‌.

ಸ್ಮಾರ್ಟ್‌ ಸಿಟಿಯಿಂದ ಎಲ್‌ಇಡಿ ಬಲ್ಬ್
ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೋತಿತೋಪು, ಅಮಾನಿಕೆರೆ, ಗಾಜಿನಮನೆ, ಶಿರಾಗೇಟ್‌, ಶ್ರೀದೇವಿ ಕಾಲೇಜಿನವರೆಗೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಎಲ್‌ಇಡಿ ಬಲ್ಬ್ ಹಾಕಲಾಗುತ್ತದೆ. ಇದರಲ್ಲಿ 136 ವಿದ್ಯುತ್ ಕಂಬಗಳು ಬೆಳಕು ನೀಡಲಿವೆ. ಈಗಾಗಲೇ ಕಂಬಗಳನ್ನು ಹಾಕಲು ಗುರುತು ಮಾಡಿದ್ದು, ಇದಕ್ಕೆ ಸುಮಾರು ₹ 7 ಲಕ್ಷ ವೆಚ್ಚವಾಗಲಿದೆ. ಸಂತೋಷ್‌ ಬಿಲ್ಡ್‌ವೇರ್‌ನವರು ಟೆಂಡರ್‌ ವಹಿಸಿಕೊಂಡಿದ್ದಾರೆ. ಇಲ್ಲಿ ಲೈಟ್‌ಗಳು ಸ್ವಯಂ ಚಾಲಿತವಾಗಿ ಬೆಳಗಲಿದ್ದು, ಸಂಜೆ 6.30ರಿಂದ ಬೆಳಿಗ್ಗೆ 5.30ರ ವರೆಗೆ ಉರಿಯಲಿವೆ. ಸ್ಮಾರ್ಟ್‌ ಸಿಟಿ ಯೋಜನೆ ಮೂಲಕ 7 ವರ್ಷಗಳ ಕಾಲ ನಿರ್ವಹಣೆ ಮಾಡಲಾಗುತ್ತದೆ ಎಂದು ಸ್ಮಾರ್ಟ್‌ ಸಿಟಿ ಯೋಜನೆ ಎಂಜಿನಿಯರ್‌ ಮಂಜುನಾಥ್‌ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು