ಶುಕ್ರವಾರ, ಏಪ್ರಿಲ್ 3, 2020
19 °C
ತುಮಕೂರು ಗಾಜಿನ ಮನೆ, ಟೌನ್‌ಹಾಲ್ ವೃತ್ತದಲ್ಲಿ ಭಾರಿ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಮಾವಣೆ

ಅಂಗನವಾಡಿ ಕಾರ್ಯಕರ್ತೆಯರಿಂದ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೆಯುವ ಚಳಿಯಲ್ಲಿಯೇ ನಡುಗುತ್ತ ಮಲಗಿದ ಮಹಿಳೆಯರು, ಬ್ಯಾಗುಗಳೇ ತಲೆದಿಂಬು, ಶೌಚಕ್ಕೆ ವ್ಯವಸ್ಥೆ ಇಲ್ಲದೆ ಪರದಾಟ...ಇದು ನಗರದ ಗಾಜಿನ ಮನೆಯಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿದ್ದ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಆಗ್ರಹಿಸಿ ಮಂಗಳವಾರ ನಗರದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡದ ಕಾರಣ ಹಾಗೂ ಸಂಘಟನೆಯ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಮಾತುಕತೆಗೆ ತೆರಳಿದ್ದರಿಂದ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಕಾರ್ಯಕರ್ತೆಯರು ಗಾಜಿನ ಮನೆಯಲ್ಲಿಯೇ ತಂಗಿದರು.  

ಬೆಳಿಗ್ಗೆಯಿಂದಲೇ ನಾನಾ ಭಾಗಗಳ ಕಾರ್ಯಕರ್ತೆಯರು ಬಸ್, ರೈಲುಗಳಲ್ಲಿ ನಗರಕ್ಕೆ ಬಂದರು. ಟೌನ್‌ಹಾಲ್ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದರು. ಗಾಜಿನ ಮನೆಯ ಮುಂಭಾಗದ ರಸ್ತೆಗಳಲ್ಲಿ ಕಿಕ್ಕಿರಿದು ನೆರೆದರು.

ಪಾದಯಾತ್ರೆ ಅನುಮತಿ ನಿರಾಕರಣೆಗೆ ಬಗ್ಗೆ ಅಂಗನವಾಡಿ ಫೆಡರೇಷನ್ ಮುಖಂಡರ ಜತೆ ಗಾಂಧಿನಗರದ ಜನಚಳವಳಿ ಕೇಂದ್ರದಲ್ಲಿ ಪೊಲೀಸರು ಮಾತುಕತೆ ನಡೆಸಿದರು. ನಂತರ ಮುಖಂಡರು ಅಲ್ಲಿಂದ ಟೌನ್‌ಹಾಲ್ ಬಳಿಗೆ ಬಂದರು. ಅದಾಗಲೇ ಜಮಾವಣೆಗೊಂಡಿದ್ದ ಕಾರ್ಯಕರ್ತೆಯರು ಘೋಷಣೆಗಳ ಮೂಲಕ ಹಕ್ಕೊತ್ತಾಯ ಮಂಡಿಸುತ್ತಿದ್ದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಮ್ಮ ಹಕ್ಕು. ಸರ್ಕಾರ ಈ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ನಾವು ಯಾವುದೇ ವಿಧ್ವಂಸದ ಕೃತ್ಯಗಳಲ್ಲಿ ತೊಡಗಿಲ್ಲ. ಆದರೆ ನಮ್ಮ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕಲು ಮುಂದಾಗಿದೆ. ಇದು ನಿಜಕ್ಕೂ ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಿಂಧು, ‘ಇದು ಸರ್ಕಾರದ ದೌರ್ಜನ್ಯ ಎತ್ತಿ ತೋರುತ್ತಿದೆ. ರಾಜ್ಯ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೌನ್‌ಹಾಲ್‌ನಿಂದ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಗಾಜಿನ ಮನೆಯತ್ತ ತೆರಳಿದರು. ಅಲ್ಲಿ ಬಹಿರಂಗ ಸಮಾವೇಶ ನಡೆಯಿತು.  

ಪ್ರಾಂತರೈತ ಸಂಘದ ಯು.ಬಸವರಾಜು, ಸಿಐಟಿಯು ಸಂಘಟನೆ ಮುಖಂಡರಾದ ಎಚ್‌.ಎಸ್.ಸುನಂದಾ, ಮೀನಾಕ್ಷಿ ಸುಂದರಂ, ಜಿ. ಕಮಲಾ, ಕೆ.ಎನ್.ಉಮೇಶ್, ಎಸ್‌ಎಫ್ಐ ಸಂಘಟನೆಯ ಗುರುರಾಜ್ ದೇಸಾಯಿ, ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಅಜ್ಜಪ್ಪ ಇದ್ದರು.

***

ರಾತ್ರೋರಾತ್ರಿ ಅನುಮತಿ ನಿರಾಕರಣೆ

ತುಮಕೂರು: ನಾಡಿನ ಮಕ್ಕಳನ್ನು ಸಲಹಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಕ್ರಿಮಿನಲ್‌ಗಳಂತೆ ಕಂಡು ಪಾದಯಾತ್ರೆ ತಡೆಯಲು ಮುಂದಾಗಿದೆ ಎಂದು ಎಸ್‌.ವರಲಕ್ಷ್ಮಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.9ರ ಸಂಜೆ 7ಗಂಟೆಯವರೆಗೂ ಲಿಖಿತವಾಗಿ ಅನುಮತಿ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ರಾತ್ರಿ 11ಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ದೂರವಾಣಿ ಕರೆ ಮೂಲಕ ಅನುಮತಿ ನಿರಾಕರಣೆಯ ಮಾಹಿತಿ ನೀಡಿದರು’ ಎಂದರು.

ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಕೋಲಾರ, ಬೆಂಗಳೂರಿನಿಂದ ಹೊರಟವರಿಗೆ ಪೊಲೀಸರು ಅನುಮತಿ ನಿರಾಕರಿಸಿ ಅವರ ಕುಟುಂಬದವರಿಗೆ ಧಮಕಿ ಹಾಕಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ನಾಗರತ್ನ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ದೂರಿದರು.

ಕೋಲಾರದಲ್ಲಿ ಕಾಯ್ದಿರಿಸಿದ 3 ಬಸ್‌ಗಳನ್ನು ರದ್ದುಪಡಿಸಿದ್ದಾರೆ. ಗೌರಿಬಿದನೂರಿನಲ್ಲಿ 2 ಬಸ್, 3 ಟೆಂಪೊ, ಚಿಂತಾಮಣಿಯಲ್ಲಿ 400 ಜನರನ್ನು ಹಾಗೂ ಗುಲ್ಬರ್ಗದಿಂದ ಗೌರಿಬಿದನೂರು ಮೂಲಕ ಬಂದ 2 ಬಸ್‌, 2ವ್ಯಾನ್‌ಗಳನ್ನು ತಡೆದಿದ್ದಾರೆ. ತುಮಕೂರಿನಲ್ಲೂ ಭಯದ ವಾತಾವರಣವನ್ನು ಪೊಲೀಸರು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

ಜನರು ತಮ್ಮ ಹಕ್ಕುಗಳನ್ನು ಕೇಳಲು ಬಂದಾಗ ತಡೆಯುತ್ತಿರುವುದು ಜನರ ಹಕ್ಕುಗಳ ಮೇಲಿನ ದಾಳಿ ಆಗುತ್ತದೆ. ಇದನ್ನು ನಾವು ಖಂಡಿಸುತ್ತೇವೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಹೋರಾಟ ಹತ್ತಿಕ್ಕುವ ಬದಲಿಗೆ ಅಂಗನವಾಡಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕು ಎಂದರು.

****

ತಾಯಂದಿರೇ ಸರ್ಕಾರ ಕಿತ್ತೆಸೆಯುವರು

ಗಾಜಿನ ಮನೆಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಯಡಿಯೂರಪ್ಪ ಅವರೇ ಕಾಂಗ್ರೆಸ್ ನಿಮ್ಮನ್ನು ಕಿತ್ತೊಗೆಯುವ ಬದಲು ಈ ತಾಯಂದಿರೇ ನಿಮ್ಮ ಸರ್ಕಾರ ಕಿತ್ತು ಎಸೆಯುವರು’ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ವೈಜ್ಞಾನಿಕವಾಗಿವೆ. ಅಂಗನವಾಡಿಗಳನ್ನು ನಾಶ ಮಾಡಲು ಪಯಾಯ ವ್ಯವಸ್ಥೆ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಬೇಡಿಕೆ ಈಡೇರದಿದ್ದರೆ ಗ್ರಾಮ ಸ್ವರಾಜ್ ಹಾಗೂ ಜನಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುತ್ತವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು