ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ತುಮಕೂರು: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ರಸ್ತೆ ಮಾಯ!

ರಸ್ತೆ ಆಕ್ರಮಿಸಿಕೊಂಡ ವರ್ತಕರು, ವಾಹನ, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ
ಮೈಲಾರಿ ಲಿಂಗಪ್ಪ
Published 4 ಮೇ 2024, 8:49 IST
Last Updated 4 ಮೇ 2024, 8:49 IST
ಅಕ್ಷರ ಗಾತ್ರ

ತುಮಕೂರು: ಅಂತರಸನಹಳ್ಳಿ ಕೆರೆಯನ್ನು ಮಾರುಕಟ್ಟೆ ನುಂಗಿತ್ತು, ಈಗ ಇದೇ ಮಾರುಕಟ್ಟೆಯ ಜಾಗವನ್ನು ಕೆಲವು ಪ್ರಭಾವಿ ವರ್ತಕರು ನುಂಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಾಹನ, ಸಾರ್ವಜನಿಕರ ಓಡಾಟಕ್ಕೆ ಮೀಸಲಿದ್ದ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.

ಇದನ್ನು ತಡೆದು ಅಗತ್ಯ ಕ್ರಮಕೈಗೊಳ್ಳಬೇಕಿದ್ದ ಎಪಿಎಂಸಿ ಅಧಿಕಾರಿಗಳು ಕೇವಲ ಸುಂಕ ವಸೂಲಿಗೆ ಸೀಮಿತವಾಗಿದ್ದಾರೆ. ಇಲ್ಲಿ ಫುಟ್‌ಪಾತ್‌ ವ್ಯಾಪಾರಿಗಳಿಗಿಂತ ಅಂಗಡಿ ಮಳಿಗೆ ಇಟ್ಟುಕೊಂಡವರ ಅತಿಕ್ರಮಣವೇ ಹೆಚ್ಚು. ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮಾತಿಗೂ ಕ್ಯಾರೆ ಎನ್ನುತ್ತಿಲ್ಲ.

ಪ್ರತಿ ದಿನ ಬೆಳಗ್ಗೆ–ಸಂಜೆ, ವಾರಾಂತ್ಯ ಮತ್ತು ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ವಾಹನಗಳ ಓಡಾಟಕ್ಕೂ ಜಾಗ ಇರುವುದಿಲ್ಲ. ಕೆಲವೊಮ್ಮೆ ಮಾರುಕಟ್ಟೆಯ ಮುಖ್ಯದ್ವಾರದಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ಸಾಮಗ್ರಿ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಕೃಷಿ ಉತ್ಪನ್ನ ಸಾಗಿಸುವ ರೈತರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ.

ಎಪಿಎಂಸಿ ಅಧಿಕಾರಿಗಳು ಆಗೊಮ್ಮೆ–ಹೀಗೊಮ್ಮೆ ಬಂದು ವ್ಯಾಪಾರಿಗಳಿಗೆ, ವರ್ತಕರಿಗೆ ಎಚ್ಚರಿಕೆ ಕೊಟ್ಟು ಹೋಗುತ್ತಾರೆ. ಅಲ್ಪ ಪ್ರಮಾಣದ ದಂಡ ವಿಧಿಸುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅಧಿಕಾರಿಗಳು ‘ಬಂದ ಪುಟ್ಟ–ಹೋದ ಪುಟ್ಟ’ ಎಂಬಂತಾಗಿದ್ದಾರೆ. ಯಾರೊಬ್ಬರೂ ಮಾರುಕಟ್ಟೆಯನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿಲ್ಲ.

ಈ ಹಿಂದೆ ಕರೆಯಿದ್ದ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದೆ. ಸದ್ಯ ಮಾರುಕಟ್ಟೆ 8 ಎಕರೆ ವಿಸ್ತೀರ್ಣ ಹೊಂದಿದೆ. ನಗರದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಹೂವು, ಹಣ್ಣು, ತರಕಾರಿ ಸೇರಿದಂತೆ ಎಲ್ಲ ಅಗತ್ಯ ಸಾಮಗ್ರಿ ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಲಕ್ಷಾಂತರ ರೂಪಾಯಿ ವ್ಯಾಪಾರ– ವಹಿವಾಟು ನಡೆಯುತ್ತದೆ.

ಮಾರುಕಟ್ಟೆಯಲ್ಲಿ 340 ವ್ಯಾಪಾರ ಮಳಿಗೆಗಳಿವೆ. ಪ್ರತಿಯೊಂದಕ್ಕೆ ₹500ರಿಂದ ₹10 ಸಾವಿರದ ವರೆಗೆ ಬಾಡಿಗೆ ಪಡೆಯಲಾಗುತ್ತಿದೆ. ಪ್ರತಿ ತಿಂಗಳು ₹4 ಲಕ್ಷ ಹಣ ಬಾಡಿಗೆ ರೂಪದಲ್ಲಿ ಎಪಿಎಂಸಿಗೆ ಸಂದಾಯವಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಿಲ್ಲ.

ಮಾರುಕಟ್ಟೆಯ ಮುಂಭಾಗದಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಮಾರುಕಟ್ಟೆಯ ಕಸ, ತ್ಯಾಜ್ಯ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ಇಲ್ಲಿನ ಆಟೊ ನಿಲ್ದಾಣದ ಬಳಿ ಕಸದ ರಾಶಿಯೇ ಬಿದ್ದಿದೆ. ‘ಮಾರುಕಟ್ಟೆ ಆವರಣವಷ್ಟೇ ನಮ್ಮ ವ್ಯಾಪ್ತಿಗೆ ಬರುತ್ತದೆ. ಅದರಿಂದ ಆಚೆ ನಮಗೆ ಸಂಬಂಧವಿಲ್ಲ’ ಎಂಬುವುದು ಎಪಿಎಂಸಿ ಅಧಿಕಾರಿಗಳ ವಾದ. ಪಾಲಿಕೆಯ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ಮಾರುಕಟ್ಟೆಯ ಒಳಗೆ, ಹೊರಗೆ ನಿರ್ವಹಣೆ ಇಲ್ಲದಂತಾಗಿದೆ.

ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದ್ದರೂ ಸಂಚಾರ ಪೊಲೀಸರು ವ್ಯವಸ್ಥಿತವಾಗಿ ನಿಯಂತ್ರಿಸುತ್ತಿಲ್ಲ. ನಗರದಿಂದ ಕೊರಟಗೆರೆ, ಮಧುಗಿರಿ ಕಡೆಗೆ ತೆರಳುವ ಹಾಗೂ ಆ ಕಡೆಯಿಂದ ನಗರಕ್ಕೆ ಬರುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ರಸ್ತೆಗೆ ಹೊಂದಿಕೊಂಡಂತೆ, ಕೆಲವೊಮ್ಮೆ ರಸ್ತೆಯಲ್ಲೇ ನಿಂತು ವ್ಯಾಪಾರ ಮಾಡುತ್ತಿದ್ದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಸಂಚಾರ ಪೊಲೀಸರು ಕೆಲವೊಮ್ಮೆ ಭೇಟಿನೀಡಿ, ನಂತರ ಮಾಯವಾಗುತ್ತಾರೆ. ಸ್ಥಳದಲ್ಲೇ ನಿಂತು ನಿಯಂತ್ರಿಸುವ ಕೆಲಸ ಮಾಡಬೇಕು ಎಂಬುದು ಜನರ ಒತ್ತಾಯವಾಗಿದೆ.

ರಸ್ತೆಯಲ್ಲಿ ವ್ಯಾಪಾರ ನಡೆಸುವವರಿಗೆ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ

-ಎಂ.ವಿ.ಸುಮಾ ಎಪಿಎಂಸಿ ಕಾರ್ಯದರ್ಶಿ

ಬಿಸಿಲಿನಲ್ಲಿ ವಾಹನಗಳು

ಇಡೀ ಮಾರುಕಟ್ಟೆಯಲ್ಲಿ ವಾಹನಗಳ ನಿಲುಗಡೆಗೆ ಯಾವುದೇ ಸ್ಥಳಾವಕಾಶ ನಿಗದಿಪಡಿಸಿಲ್ಲ. ಇದರಿಂದ ವಾಹನಗಳು ಬಿಸಿಲಿಗೆ ಸುಟ್ಟು ಮಳೆಗೆ ನೆಂದು ಹಾಳಾಗುತ್ತಿವೆ. ಅತಿದೊಡ್ಡ ಮಾರುಕಟ್ಟೆಯಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿಲ್ಲ. ಇದರಿಂದಾಗಿ ರಸ್ತೆಯ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ‘ಈ ಹಿಂದೆ ವರ್ಷಕ್ಕೊಮ್ಮೆ ಹರಾಜು ಪ್ರಕ್ರಿಯೆ ನಡೆಸಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಈ ಕೆಲಸ ನಡೆದಿಲ್ಲ. ಇದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ’ ಎಂದು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಜು ಪ್ರತಿಕ್ರಿಯಿಸಿದರು.

ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಸಿದ್ಧತೆ

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರುಕಟ್ಟೆಯ ಖಾಲಿ ಜಾಗದಲ್ಲಿ ಕ್ಯಾಂಟೀನ್‌ ಆರಂಭಿಸಲು ಮಹಾನಗರ ಪಾಲಿಕೆಗೆ ಎಪಿಎಂಸಿ ಪತ್ರ ಬರೆದಿದೆ. ನಿತ್ಯ ನೂರಾರು ಜನರು ಭೇಟಿ ನೀಡುವ ಜಾಗದಲ್ಲಿ ಕ್ಯಾಂಟೀನ್‌ ತೆರೆದರೆ ತುಂಬಾ ಜನರಿಗೆ ಪ್ರಯೋಜನವಾಗಲಿದೆ. ಮಹಾನಗರ ಪಾಲಿಕೆ ಎಪಿಎಂಸಿ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ಯಾಂಟೀನ್‌ ಪ್ರಾರಂಭಕ್ಕೆ ಒತ್ತು ನೀಡಬೇಕು ಎಂಬುವುದು ಹಮಾಲಿಗಳು ಕೂಲಿ ಕಾರ್ಮಿಕರ ಒತ್ತಾಯವಾಗಿತ್ತು. ಕೊನೆಗೂ ಕ್ಯಾಂಟೀನ್‌ ಆರಂಭಕ್ಕೆ ತಯಾರಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT