ಭಾನುವಾರ, ಜೂಲೈ 5, 2020
27 °C
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಕಚೇರಿಯಿಂದ ಕೇಂದ್ರ ಕಚೇರಿ ತಲುಪಿದ್ದ 224 ಅರ್ಜಿಗಳು

ತುಮಕೂರು: ಕಲಾವಿದರ ಪಟ್ಟಿಗೆ ಕತ್ತರಿ!

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

prajavani

ತುಮಕೂರು: ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ₹ 2 ಸಾವಿರ ಪರಿಹಾರಧನ ನೀಡುವ ವಿಚಾರವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶಿಫಾರಸು ಮಾಡಿದ್ದ ಪಟ್ಟಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕತ್ತರಿ ಪ್ರಯೋಗವಾಗಿದೆ! ಅಲ್ಲದೆ ಅರ್ಜಿ ಸಲ್ಲಿಸಿ ತಿಂಗಳಾದರೂ ನೆರವನ್ನೂ ನೀಡಿಲ್ಲ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ₹ 2 ಸಾವಿರ ನೆರವು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿತ್ತು. ಏ. 27ರ ವರೆಗೆ ಅರ್ಜಿ ಸಲ್ಲಿಸಲು ಗಡುವು ನೀಡಿತ್ತು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 300ಕ್ಕೂ ಹೆಚ್ಚು ಕಲಾವಿದರು ಆನ್‌ಲೈನ್ ಮತ್ತು ಲಿಖಿತವಾಗಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 224 ಮಂದಿಯ ಅರ್ಜಿಯನ್ನು ಕೇಂದ್ರ ಕಚೇರಿಗೆ ಶಿಫಾರಸು ಮಾಡಿತ್ತು. ಉಳಿಕೆ ಅರ್ಜಿಗಳು ತಿರಸ್ಕೃತವಾಗಿದ್ದವು.

ಆದರೆ ಜಿಲ್ಲಾ ಕಚೇರಿ ಶಿಫಾರಸು ಮಾಡಿದ್ದ 224 ಮಂದಿ ಕಲಾವಿದರಲ್ಲಿ 50ಕ್ಕೂ ಹೆಚ್ಚು ಹೆಸರುಗಳನ್ನು ಕೇಂದ್ರ ಕಚೇರಿಯಲ್ಲಿ ಕೈ ಬಿಡಲಾಗಿದೆ. ಎಲ್ಲ ಜಿಲ್ಲೆಗಳ ಕಲಾವಿದರಿಗೆ ನೆರವು ನೀಡಬೇಕಾಗಿದೆ. ಆರ್ಥಿಕ ಸಂಪನ್ಮೂಲ ನೋಡಿಕೊಂಡು ಆಯ್ಕೆ ಮಾಡಲಾಗುತ್ತಿದೆ ಎನ್ನುತ್ತವೆ ಇಲಾಖೆಯ ಉ‌ನ್ನತ ಮೂಲಗಳು. ಮತ್ತೊಂದು ಕಡೆ ಪರಿಹಾರ ಧನಕ್ಕೆ ಆಯ್ಕೆಯಾಗಿರುವ ಕಲಾವಿದರ ಖಾತೆಗೆ ಇನ್ನೂ ಹಣ ಜಮೆ ಆಗಿಲ್ಲ!

ಪಟ್ಟಿಗೆ ಕತ್ತರಿ ಪ್ರಯೋಗ ಮತ್ತು ಇಷ್ಟು ದಿನವಾದರೂ ಪರಿಹಾರ ಧನ ನೀಡದಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ ಎನ್ನುವ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂತಿಮ ಆಯ್ಕೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಲಹೆಗಳನ್ನು ಪಡೆಯದ ಹಾಗೂ ಆಯ್ಕೆ ಆಗಿರುವವರ ಬಗ್ಗೆ ಯಾವುದೇ ಮಾಹಿತಿ ನೀಡಿದ ಮೇಲಧಿಕಾರಿಗಳ ನಡೆ ಕಲಾವಿದರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.

ತಹಶೀಲ್ದಾರ್ ಮೂಲಕವೂ ಕೆಲವು ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳೂ ಸೇರಿ ಜಿಲ್ಲೆಯಲ್ಲಿ 700ರಿಂದ 800 ಕಲಾವಿದರು ಪರಿಹಾರಧನ ಕೋರಿದ್ದರು. ಈ ಅರ್ಜಿಗಳನ್ನು ಸದ್ಯಕ್ಕೆ ಕಳುಹಿಸಬೇಡಿ ಎಂದು ಕೇಂದ್ರ ಕಚೇರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಮತ್ತಷ್ಟು ಅನುದಾನ ನೀಡಿದರೆ ಇಲ್ಲವೆ ಈಗ ಮೀಸಲಿರುವ ಹಣ ಉಳಿದರೆ ಈ ಅರ್ಜಿಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಇದಲ್ಲದಿದ್ದರೆ ಅರ್ಜಿಗಳು ಕಚೇರಿಯಲ್ಲಿಯೇ ದೂಳು ತಿನ್ನುತ್ತವೆ.

ಇಲಾಖೆಯಲ್ಲಿ ಹಣವಿಲ್ಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ಆದಾಯವನ್ನು ತರುವುದಿಲ್ಲ. ಆದ ಕಾರಣ ಸರ್ಕಾರ ಸಹ ಅಷ್ಟು ಕಾಳಜಿ ವಹಿಸುವುದಿಲ್ಲ. ಕಲಾವಿದರಿಗೆ ಕಾರ್ಯಕ್ರಮ ನೀಡಲು ಹಣ ಸೇರಿದಂತೆ ಯಾವುದೇ ಕ್ರಿಯಾಯೋಜನೆಗಳನ್ನೂ ರೂಪಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪರಿಹಾರ ಧನ ಪಡೆಯಲು ಸರ್ಕಾರದ ಯಾವುದೇ ಪಿಂಚಣಿ ಪಡೆಯಬಾರದು. ಕನಿಷ್ಠ 10 ವರ್ಷ ಕಲಾ ಸೇವೆ ಮಾಡಿರಬೇಕು ಎನ್ನುವ ನಿಯಮಗಳು ಇವೆ.

ತುಮಕೂರು ಜಿಲ್ಲೆ ಕಲಾವಿದರ ಪ್ರಮುಖ ನೆಲೆ. ಜಾನಪದ, ರಂಗಭೂಮಿ ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿರುವ ಕಲಾವಿದರು ಹೇರಳವಾಗಿದ್ದಾರೆ. ವೃತ್ತಿ ರಂಗಭೂಮಿಯ ಕಲಾವಿದರೂ ಬಹುಸಂಖ್ಯೆಯಲ್ಲಿ ಇದ್ದಾರೆ.

ಪಿಂಚಣಿಯೂ ಇಲ್ಲ; ಪರಿಹಾರವೂ ಇಲ್ಲ

ಸಕ್ರಿಯ ಮತ್ತು ಯುವ ಕಲಾವಿದರು ಪರಿಹಾರ ಧನ ನೀಡದಿದ್ದರೂ ಬದುಕು ನಡೆಸುತ್ತಾರೆ. ಆದರೆ ಪಿಂಚಣಿಗಾಗಿ ಅರ್ಜಿ ಹಾಕಿರುವ ಹಿರಿಯ ಕಲಾವಿದರು ಅತಂತ್ರರಾಗಿದ್ದಾರೆ.

ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಹಿರಿಯ ಕಲಾವಿದರು ಪಿಂಚಣಿ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ. ಇವರಿಗೆ ಇನ್ನೂ ಯಾವುದೇ ಆದೇಶ ಪತ್ರಗಳು ಬಂದಿಲ್ಲ. ವಯಸ್ಸಾದ ಕಾರಣ ಈ ಕಲಾವಿದರು ಚಟುವಟಿಕೆಗಳಿಂದಲೂ ದೂರ ಉಳಿದಿದ್ದಾರೆ. ಪರಿಹಾರದ ಧನ ಪಡೆಯುವ ಅವಕಾಶವೂ ಅವರಿಗೆ ಇಲ್ಲವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು