ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ

ಶಾಸಕ ಜ್ಯೋತಿಗಣೇಶ್ ಸೇರಿ ಹಲವರ ಬಂಧನ, ಬಿಡುಗಡೆ
Published 7 ಮಾರ್ಚ್ 2024, 5:15 IST
Last Updated 7 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ತುಮಕೂರು: ಬಜರಂಗದಳ ಮುಖಂಡ ಪುತ್ತೂರಿನ ಮುರಳಿ ಕೃಷ್ಣ ಅಸಂತಡ್ಕ ಬಂಧನ ಖಂಡಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿದ್ದ ಮುರಳಿ ಕೃಷ್ಣ ಅವರನ್ನು ಕುಣಿಗಲ್ ಸಮೀಪ ಪೊಲೀಸರು ಬಂಧಿಸಿದರು. ಇದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿವೆ. ದೇಶ ವಿರೋಧಿ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ಇಂತಹ ಕೃತ್ಯಗಳನ್ನು ತಡೆಯಬೇಕಿದ್ದ ರಾಜ್ಯ ಸರ್ಕಾರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಾ, ಪೋಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ವಿಧಾನಸೌಧದ ಒಳಗೆ ಬಿಡುತ್ತಾರೆ. ದೇಶ ದ್ರೋಹಿಗಳನ್ನು ಬಂಧಿಸಲು ಸರ್ಕಾರ ಹಾಗೂ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ದೇಶ ವಿರೋಧಿಗಳಿಗೆ ಮೃದು ಧೋರಣೆ ತಳೆದಿದೆ. ವೋಟಿನ ಓಲೈಕೆ ರಾಜಕಾರಣ ಮಾಡುತ್ತಿದ್ದು, ರಾಜ್ಯವನ್ನು ಭಯೋತ್ಪಾದಕರ ತಾಣ ಮಾಡಲು ಹೊರಟಿದೆ. ಇಂತಹ ನಿರ್ಧಾರಗಳಿಂದಾಗಿ ಬಾಂಬ್ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ‘ಕಾಂಗ್ರೆಸ್ ಸರ್ಕಾರದಲ್ಲಿ ದೇಶದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ನಿಯಂತ್ರಿಸಬೇಕಾದ ಸರ್ಕಾರ ಒಂದು ಕೋಮಿನ ಮತ ಓಲೈಕೆಯಲ್ಲಿ ತೊಡಗಿದ್ದು, ವಿದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳನ್ನು ಕಡೆಗಣಿಸುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ‘ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

ಮುಖಂಡರಾದ ಎಸ್.ಶಿವಪ್ರಸಾದ್, ವೈ.ಎಚ್.ಹುಚ್ಚಯ್ಯ, ಎಚ್.ಎನ್.ಚಂದ್ರಶೇಖರ್, ಬ್ಯಾಟರಂಗೇಗೌಡ, ಎಚ್.ಟಿ.ಬೈರಪ್ಪ, ಬೈರಣ್ಣ, ಜಿ.ಕೆ.ಶ್ರೀನಿವಾಸ್, ಟಿ.ಆರ್.ಸದಾಶಿವಯ್ಯ, ರುದ್ರೇಶ್, ಹನುಮಂತರಾಜು, ನವಚೇತನ್, ಎಚ್.ಎಂ.ರವೀಶಯ್ಯ, ಸಂದೀಪ್‍ಗೌಡ, ಜಗದೀಶ್, ಬೆಳ್ಳಿ ಲೋಕೇಶ್, ಬಾವಿಕಟ್ಟೆ ನಾಗಣ್ಣ, ಸಿ.ಎನ್.ರಮೇಶ್, ವಿಷ್ಣುವರ್ಧನ್, ಸತ್ಯಮಂಗಲ ಜಗದೀಶ್, ಗಣೇಶ್, ಲತಾ ಬಾಬು, ಶಕುಂತಲಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT