ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮಾರಾಟ ನಕಲಿ ಒಪ್ಪಂದ ಪ್ರಕರಣ; ಆರೋಪಿ ಪತ್ತೆಗೆ ಜಾಲ

Last Updated 4 ಮೇ 2019, 1:53 IST
ಅಕ್ಷರ ಗಾತ್ರ

ಗುಬ್ಬಿ: ಪೋಷಕರೇ ಹೆತ್ತ ಮಗಳನ್ನು ₹ 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ನಕಲಿ ಬಾಂಡ್ ಪೇಪರ್‌ನಲ್ಲಿ ಒಪ್ಪಂದ ಪತ್ರ ಸೃಷ್ಟಿಸಿ ಮಾವ ಮತ್ತು ಅತ್ತೆ ಮೇಲೆ ಆರೋಪ ಮಾಡಿದ್ದ ಅಳಿಯನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಚೇಳೂರು ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಆರೋಪಿ ರಾಜಶೇಖರ್ ಪತ್ತೆಗೆ ಚೇಳೂರು ಠಾಣೆ ಪೊಲೀಸರು ಜಾಲ ಬೀಸಿದ್ದಾರೆ.

ಬಾಲಕಿಯ ತಂದೆ-ತಾಯಿ ಚೇಳೂರು ಹೋಬಳಿಯ ಹಳ್ಳಿಯೊಂದರ ವ್ಯಕ್ತಿಗೆ ಬಾಲಕಿಯನ್ನು ಲೈಂಗಿಕವಾಗಿ ಬಳಿಸಿಕೊಳ್ಳಲು ₹ 1.50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎನ್ನುವ ಬರಹವಿರುವ ಒಪ್ಪಂದದ ನಕಲಿ ಕರಾರು ಪತ್ರಗಳು ಹಾಗೂ ತಿಪಟೂರು ಮಕ್ಕಳ ಸಂರಕ್ಷಣಾಧಿಕಾರಿಗೆ ಆರೋಪಿ ರಾಜಶೇಖರ್ ಬರೆದಿರುವ ದೂರು ಅರ್ಜಿಗಳು ಗುರುವಾರ ವಾಟ್ಸ್‌ ಆ್ಯಪ್‌ ಗ್ರೂಪ್ ಗಳಲ್ಲಿ ಹರಿದಾಡಿದ್ದವು.

ಪ್ರಕರಣ ಜಾಡು ಹಿಡಿದು ಮಕ್ಕಳ ರಕ್ಷಣಾಧಿಕಾರಿಗಳು ಬಾಲಕಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದ್ದರು. ಅಕ್ಕನ ಗಂಡನೇ (ಭಾವ) ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ. ಆ ಕಾರಣಕ್ಕೆ ಮನೆ ತೊರೆದಿದ್ದೆ ಎಂದು ಹೇಳಿಕೊಂಡಿದ್ದಳು.

ಅಲ್ಲದೇ, ಇದೆಲ್ಲ ತನ್ನ ಅಕ್ಕನ ಗಂಡ ರಾಜಶೇಖರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ನನ್ನ ಮಾನ ನಷ್ಟ ಮಾಡಿದ್ದಾರೆ ಎಂದು ಚೇಳೂರು ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ.

ಪೋಷಕರ ಬಳಿ ಬಾಲಕಿ

ಈಗ ಬಾಲಕಿ ಸ್ವಗ್ರಾಮದಲ್ಲಿ ತಂದೆ-ತಾಯಿ ಬಳಿಯಿದ್ದು, ಆಕೆ ಸುರಕ್ಷಿತವಾಗಿದ್ದಾಳೆ. ಆರೋಪಿ ರಾಜಶೇಖರ್ ಪತ್ತೆ ಹಚ್ಚಿ ತನಿಖೆ ನಡೆಸುವ ಪ್ರಕ್ರಿಯೆಯನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ಮಕ್ಕಳ ರಕ್ಷಣಾಧಿಕಾರಿ ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪೋಕ್ಸೊ ಕಾಯ್ದೆಯಡಿ ಬಾಲಕಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಾಗಿದೆ. ಚೇಳೂರು ಠಾಣೆಯಲ್ಲಿ ದೂರು ಸಲ್ಲಿಸುವಾಗ ಆರೋಪಿಗೆ ಕರೆ ಮಾಡಿ ಠಾಣೆಗೆ ಬಂದು ಹೇಳಿಕೆ ನೀಡಲು ಹೇಳಿದಾಗ ನಾನೇಕೆ ಠಾಣೆಗೆ ಬರಲಿ, ಚಿಕ್ಕನಾಯಕನಹಳ್ಳಿಯಲ್ಲಿದ್ದೇನೆ ಎಂದು ಹೇಳಿ ಬರಲಿಲ್ಲ. ದೂರು ಕೊಟ್ಟಿರುವುದರಿಂದ ಪೊಲೀಸರೇ ಕರೆ ತಂದು ವಿಚಾರಣೆ ಮಾಡಬೇಕು ಎಂದು ಹೇಳಿದರು.

‘ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ಆರೋಪಿಯ ಬಂಧನವನ್ನೇನೂ ಮಾಡಿಲ್ಲ’ ಎಂದು ಚೇಳೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT