ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಸಚಿವ ಬಸವರಾಜು

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ
Last Updated 27 ಫೆಬ್ರುವರಿ 2020, 14:27 IST
ಅಕ್ಷರ ಗಾತ್ರ

ತುಮಕೂರು: ಜನರಿಗೆ ತೊಂದರೆ ಆಗದಂತೆ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜುಅಧಿಕಾರಿಗಳಿಗೆ ಸೂಚಿಸಿದರು.

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು.

ಬೇಸಿಗೆ ಮುಗಿಯುವಷ್ಟರಲ್ಲಿ ಬಹುತೇಕ ಕಾಮಗಾರಿಗಳನ್ನು ಮುಗಿಸಬೇಕು. ಮಳೆಗಾಲ ಶುರುವಾದ ಬಳಿಕ ಅಡಚಣೆಗಳು ಹೆಚ್ಚುತ್ತವೆ ಎಂದರು.

ಮಹಾತ್ಮ ಗಾಂಧಿ ಕ್ರೀಡಾಂಗಣದ ಕಾಮಗಾರಿ ಪರಿಶೀಲಿಸುವಾಗ, ‘ಕೆಲಸ ಯಾವಾಗ ಮುಗಿಯುತ್ತದೆ’ ಎಂದು ಕೇಳಿದರು. ಆಗ ಗುತ್ತಿಗೆದಾರ ‘ಸೆಪ್ಟೆಂಬರ್‌ನಲ್ಲಿ ಮುಗಿಯುತ್ತದೆ ಸರ್‌’ ಎಂದು ಮಾಹಿತಿ ನೀಡಿದರು. ‘ಈ ರೀತಿ ನಿಧಾನವಾಗಿ ಕೆಲಸ ಮಾಡಿದರೆ, ಸೆಪ್ಟೆಂಬರ್‌ ಒಳಗೆ ಜನಬಳಕೆ ಲಭ್ಯವಾಗಲಿದೆಯೆನ್ರಿ’ ಎಂದು ಪ್ರಶ್ನಿಸಿದರು.

ಅಮಾನಿಕೆರೆ ಅಂಗಳದಲ್ಲಿ ನಡೆಯುತ್ತಿರುವ ನಡಿಗೆ ಪಥ ಕಾಮಗಾರಿ ವೀಕ್ಷಿಸಿದರು. ಕೆರೆಯ ಅಂಗಳದ ಒತ್ತುವರಿ ತೆರವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ಈ ಕೆರೆ ಅಭಿವೃದ್ಧಿ ಕಾಮಗಾರಿ ಮುಗಿದರೆ, ಇದರಲ್ಲಿ 0.2 ಟಿಎಂಸಿ ಅಡಿ(190 ಎಂಸಿಎಫ್‌ಟಿ) ನೀರು ಸಂಗ್ರಹ ಮಾಡಬಹುದು. ನಗರದ ನೀರಿನ ಅಗತ್ಯತೆ ಪೂರೈಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ತುಮಕೂರಿನ ಸುತ್ತಮುತ್ತಲಿನ ಸುಮಾರು 600 ಎಕರೆ ಜಮೀನನ್ನು ಗುರುತಿಸಿ, ಸ್ಥಳೀಯ ಸಂಸದ, ಶಾಸಕರು ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದಾರೆ. ಅದರಿಂದ 6,000 ನಿವೇಶನಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಹೇಳಿದರು.

50:50 ಮಾದರಿಯಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಅದರಲ್ಲಿ 3,000 ನಿವೇಶನಗಳು ತುಮಕೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಲಭ್ಯವಾದರೆ, ಉಳಿದರ್ಧ ನಿವೇಶನಗಳು ಜಮೀನನ ಮಾಲೀಕರಿಗೆ ಹೋಗುತ್ತವೆ ಎಂದು ಹೇಳಿದರು.

ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಸಚಿವರು, ಬೇಸಿಗೆ ಸಮೀಪಿಸುತ್ತಿದೆ. ಕುಡಿಯುವ ನೀರು ಸರಬರಾಜು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಖಾತೆ ಮಾಡಿಕೊಡುವ ಕುರಿತು, ತೆರಿಗೆ ವಸೂಲಿಯ ಬಗ್ಗೆ ಮತ್ತು ನಗರದ ಸಮಸ್ಯೆಗಳ ಬಗ್ಗೆ ಮೇಯರ್‌ ಫರೀದಾ ಬೇಗಂ ಸೇರಿದಂತೆ ಪಾಲಿಕೆ ಸದಸ್ಯರು ಸಚಿವರ ಗಮನ ಸೆಳೆದರು.

ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಇದ್ದರು.

*
ಸಂಸದ ಜಿ.ಎಸ್‌.ಬಸವರಾಜು ಅವರು ತುಮಕೂರು ಅಭಿವೃದ್ಧಿಗಾಗಿ ₹180 ಕೋಟಿ ಅನುದಾನವನ್ನು ಕೇಂದ್ರದಿಂದ ತಂದಿದ್ದಾರೆ. ಅದನ್ನೂ ಸಮರ್ಪಕವಾಗಿ ಬಳಸುತ್ತೇವೆ.
-ಬಿ.ಎ.ಬಸವರಾಜು, ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT