ಭಾನುವಾರ, ಅಕ್ಟೋಬರ್ 25, 2020
25 °C

ಹೊಸಬರಿಗೆ ಟಿಕೆಟ್‌ ಬೇಡ: ಬಿಜೆಪಿ ಕಾರ್ಯಕರ್ತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಬಿಜೆಪಿಗೆ ಹೊಸದಾಗಿ ಸೇರ್ಪಡೆಯಾಗಿರುವವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಪಕ್ಷಕ್ಕಾಗಿ ದುಡಿಯುತ್ತಿರುವ ಬಿ.ಕೆ.ಮಂಜುನಾಥ್ ಅಥವಾ ಎಸ್.ಆರ್.ಗೌಡ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಪಕ್ಷಕ್ಕೆ ಸೇರಿರುವ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿರುವುದನ್ನು ವಿರೋಧಿಸಿ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಉಳಿಸುವಂತೆ ಘೋಷಣೆ ಕೂಗಿದರು.

ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಕ್ಷೇತ್ರದಲ್ಲಿ ಬಿಜೆಪಿಯನ್ನು ಬೆಳೆಸಿದ್ದಾರೆ. ಆದರೆ ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿರುವ ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡುವುದು ತಪ್ಪು. ಬೂತ್ ಸಮಿತಿ ರಚನೆ ಮಾಡುವ ಸಮಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಅವರು ಬಿ.ಕೆ.ಮಂಜುನಾಥ್ ಅಥವಾ ಎಸ್.ಆರ್.ಗೌಡ ಅವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಏಕಾಏಕಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪ್ರಭಾವಿ ವ್ಯಕ್ತಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಅವರ ಬಳಿ ಹಣ ಇಲ್ಲ ಎಂದು ಪಕ್ಷದ ಹೈಕಮಾಂಡ್ ರಾಜೇಶ್ ಗೌಡ ಅವರಿಗೆ ಮಣೆ ಹಾಕುತ್ತಿದೆ. ಆದರೆ ನಿಷ್ಟಾವಂತ ಕಾರ್ಯಕರ್ತರ ಪಡೆ ಇದೆ. ಅವರ ಬಳಿ ಹಣ ಇಲ್ಲದಿದ್ದರೆ ನಾವು ಚಂದಾ ಎತ್ತಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದರು.

ರಾಜೇಶ್ ಗೌಡ ಅವರನ್ನು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕಿತ್ತು. ಬೆಂಗಳೂರಿನಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳುವ ಅಗತ್ಯ ಏನಿತ್ತು ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಡಾ.ಬಿ.ಗೋವಿಂದಪ್ಪ, ಸೂಡಾ ಅಧ್ಯಕ್ಷ ಈರಣ್ಣ, ತಾ.ಪಂ ಉಪಾಧ್ಯಕ್ಷ ರಂಗನಾಥ ಗೌಡ, ಸದಸ್ಯ ನಾಗರಾಜು, ಇನಾಂಗೊಲ್ಲಹಳ್ಳಿ ಶಿವಣ್ಣ, ಪಾಂಡುರಂಗಪ್ಪ, ಮದನ್, ನಿರಂಜನ್, ರಮೇಶ್ ಬಾಬು, ತಿಮ್ಮಣ್ಣ, ವೀರಣ್ಣ, ಅಜ್ಜಣ್ಣ, ಶ್ಯಾಮ್, ಕೃಷ್ಣಮೂರ್ತಿ ಪರಮಶಿವಯ್ಯ, ರಾಘವೇಂದ್ರ, ನಟರಾಜು, ದೇವರಾಜು ಇದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು