ಶನಿವಾರ, ಮಾರ್ಚ್ 25, 2023
22 °C

ತುಮಕೂರು: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಹೊಟ್ಟೆಪಾಡಿಗೆ ಪರಿಶಿಷ್ಟ ಜಾತಿಯ ನಾಯಕರು ಬಿಜೆಪಿಯಲ್ಲಿ ಇದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಘಟಕದ ಕಾರ್ಯಕರ್ತರು ನಗರದ ಬಿಜಿಎಸ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ, ಘೋಷಣೆಗಳನ್ನು ಕೂಗಿದರು. ಕೂಡಲೆ ಪರಿಶಿಷ್ಟ ಜಾತಿಯವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ‘ಪರಿಶಿಷ್ಟ ಜಾತಿಯವರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳುವ ಮೂಲಕ ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ನಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ. ಈ ರೀತಿ ಮಾತನಾಡಲು ನಿಮಗೆ ನಾಚಿಕೆ ಆಗುವುದಿಲ್ಲವೆ? ಮನುಷ್ಯತ್ವ, ಮಾನ ಮರ್ಯಾದೆ ಇಲ್ಲವೆ? ಮಾಜಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಭಾಷೆ ಮೇಲೆ ಹಿಡಿತವಿಲ್ಲವೆ’ ಎಂದು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‍ನಲ್ಲಿ ಇರುವವರು ಹೊಟ್ಟೆಪಾಡಿಗಾಗಿ ಇದ್ದಾರೆಯೆ? ಜನತಾ ದಳದಲ್ಲಿ ರಾಜಕಾರಣ ಮಾಡುತ್ತಿದ್ದವರು, ಕಾಂಗ್ರೆಸ್‍ಗೆ ಹೊಟ್ಟೆಪಾಡಿಗಾಗಿ ಹೋಗಿದ್ದೀರಾ? ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ ಜನಸಾಮಾನ್ಯರಿಗೆ ಇದೆ. ಅವರ ಹೇಳಿಕೆಯನ್ನು ನೋಡಿದರೆ ಹುಚ್ಚು ಹಿಡಿದಂತೆ ಕಾಣುತ್ತಿದೆ. ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ. ಪರಿಶಿಷ್ಟ ಜಾತಿಯವರು ಪ್ರಬುದ್ಧರು, ವಿದ್ಯಾವಂತರು, ಸಶಕ್ತರಾಗಿದ್ದು, ಏನನ್ನಾದರೂ ಸಾಧನೆ ಮಾಡುವಂತಹ ಶಕ್ತಿ ಹೊಂದಿದ್ದಾರೆ. ಅಂತಹ ಶಕ್ತಿವಂತರನ್ನು ಹೊಟ್ಟೆಪಾಡಿಗಾಗಿ ಇದ್ದಾರೆ ಎಂದು ಹೇಳುತ್ತೀರಾ? ಎಂದು ಕಿಡಿಕಾರಿದರು.

ಪರಿಶಿಷ್ಟ ಜಾತಿಯವರಿಂದ ಕಾಂಗ್ರೆಸ್ ಉಸಿರಾಡುತ್ತಿದೆ. ಬರೀ ಮಾತಿನಲ್ಲೇ ಅವರನ್ನು ತೃಪ್ತಿಪಡಿಸಿ, ಅಧಿಕಾರಕ್ಕೆ ಬರುತ್ತಿರುವ ನಿಮಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ‘ಪರಿಶಿಷ್ಟ ಜಾತಿಯವರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಮ್ಮನ್ನು ಕಳೆದುಕೊಂಡು ಸೋಲುತ್ತಾ, ಅಧಿಕಾರವನ್ನೂ ಕಳೆದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ‘ಪರಿಶಿಷ್ಟ ಜಾತಿಯವರು ಗೆದ್ದರೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿ ಹೋಗುತ್ತದೆ ಎಂಬ ಸ್ವಾರ್ಥದಿಂದ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಸೋಲಿಗೆ ಕಾರಣರಾಗಿದ್ದೀರಿ. ಇದು ರಾಜ್ಯಕ್ಕೆ ಗೊತ್ತಿರುವ ವಿಚಾರ’ ಎಂದು ದೂರಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 5 ವರ್ಷಗಳಲ್ಲಿ 9,080 ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯಗಳು ನಡೆದಿವೆ. 358 ಮಂದಿ ಕಗ್ಗೊಲೆ, 908 ಮಹಿಳೆಯರ ಮೇಲೆ ಮಾನಭಂಗ ನಡೆದಿದೆ ಎಂದರು.

ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್, ಮುಖಂಡರಾದ ವರದಯ್ಯ, ಹನುಮಂತಪ್ಪ, ಪ್ರತಾಪ್, ಸುಶೀಲ್, ಸಂದೀಪ್ ಗೌಡ, ಅಂಜನಮೂರ್ತಿ, ಹನುಮಂತರಾಜು, ಕೊಪ್ಪಲ್ ನಾಗರಾಜ್, ಫರ್ಜಾನಾ ತಬಸ್ಸುಮ್, ಸೌಮ್ಯ, ಮಾರುತಿ ಗಂಗಹನುಮಯ್ಯ, ಆನಂದ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.