ಬುಧವಾರ, ಡಿಸೆಂಬರ್ 2, 2020
25 °C
ಮೂವರು ಆಕಾಂಕ್ಷಿಗಳ ಹೆಸರು ಮುನ್ನೆಲೆಗೆ

ಶಿರಾ: ಪಕ್ಷಕ್ಕಿದು ಪ್ರತಿಷ್ಠೆಯ ಪ್ರಶ್ನೆ; ಸಮರ್ಥ ಅಭ್ಯರ್ಥಿಗೆ ಬಿಜೆಪಿ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಉಪಚುನಾವಣೆ ನಿಶ್ಚಯವಾಗುತ್ತಿದ್ದಂತೆ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.

ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ತೀವ್ರ ಪೈಪೋಟಿ ಇದೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಗೆ ಹೆಚ್ಚಿನ ಮತ ನೀಡಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದುವರೆಗೆ ಒಲವು ತೋರಿಲ್ಲ. ಆದರೆ ಬದಲಾಗುತ್ತಿರುವ ರಾಜಕೀಯ ಸನ್ನಿವೇಶ ಹಾಗೂ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಈ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ‌.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಮುಖಂಡ ಬಿ.ಗೋವಿಂದಪ್ಪ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಬಿ.ಕೆ.ಮಂಜುನಾಥ್ ಪಕ್ಷದ ಹಿರಿಯ ಮುಖಂಡರಾಗಿದ್ದು, ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಗ್ರಾಮಾಂತರ ಮಟ್ಟಕ್ಕೆ ಕೊಂಡ್ಯೊಯ್ದಿದ್ದಾರೆ. 2008 ಮತ್ತು 2013ರಲ್ಲಿ ಸತತ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದಾರೆ.

ತುಮುಲ್ ನಿರ್ದೇಶಕ ಎಸ್.ಆರ್.ಗೌಡ 2018ರಲ್ಲಿ ಸ್ಪರ್ಧಿಸಿ ಸೋತಿದ್ದರೂ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ.

ಬಿ.ಗೊವಿಂದಪ್ಪ ನಗರ ಮೋರ್ಚಾ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸಹ ಆಕಾಂಕ್ಷಿಯಾಗಿದ್ದರು. 

ಪಕ್ಷದಲ್ಲಿನ ಅಂತರಿಕ ಭಿನ್ನಾಭಿಪ್ರಾಯ, ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಗೆ ಹೆಚ್ಚು ಮಹತ್ವ ನೀಡುತ್ತಿರುವುದು ಪಕ್ಷಕ್ಕೆ ಮಾರಕವಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಮೊದಲು ಬಿ.ಕೆ.ಮಂಜುನಾಥ್ ಅವರಿಗೆ ಟಿಕೆಟ್ ಘೋಷಣೆ ಮಾಡಿ ನಂತರ ಎಸ್.ಆರ್.ಗೌಡ ಅವರಿಗೆ ಟಿಕೆಟ್‌ ನೀಡಿದ್ದು ಹಲವು ಕಾರ್ಯಕರ್ತರು ಮತ್ತು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಲ್ಲಿ ಪಕ್ಷ ಸಂಘಟನೆಗಿಂತ ಮುಖಂಡರಿಗೆ ಬೆಂಬಲಿಗರ ಹಿತಕಾಯುವುದೇ ಮುಖ್ಯವಾಗಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುವಂತಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯನ್ನು ಪ್ರತಿನಿಧಿಸುತ್ತಿರುವುದರಿಂದ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸಲೇಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ. ಅವರಿಗೂ ಉಪಚುನಾವಣೆ ಪ್ರತಿಷ್ಠೆಯಾಗಿದೆ.

ಸ್ಥಳೀಯರಿಗೆ ಆಕಾಂಕ್ಷಿಗಳಿಗೆ ಟಿಕೆಟ್ ನೀಡದೆ ಹೊರಗಿನಿಂದ ಅಭ್ಯರ್ಥಿ ಕರೆ ತರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ, ನಟ ಜಗ್ಗೇಶ್ ಹೆಸರು ಪ್ರಾರಂಭದಲ್ಲಿ ಕೇಳಿ ಬಂದಿತ್ತು. ಆದರೆ ಸುರೇಶ್ ಗೌಡ ಸ್ಪರ್ಧಿಸುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.

ತೆರೆಮರೆಯ ಕಸರತ್ತು

ದಿ.ಶಾಸಕ ಬಿ.ಸತ್ಯನಾರಾಯಣ ಅವರ ಕುಟುಂಬದವರನ್ನು ಬಿಜೆಪಿಗೆ ಕರೆ ತರಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಬಿ.ಸತ್ಯನಾರಾಯಣ ಪುತ್ರ ಬಿ.ಎಸ್.ಸತ್ಯಪ್ರಕಾಶ್ ಅವರಿಗೆ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ದೊರೆಯದಿದ್ದರೆ ಅನುಕಂಪದ ಅಲೆ ಬಳಸಿಕೊಂಡು ಬಿಜೆಪಿಯಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಲೆಕ್ಕಾಚಾರವನ್ನು ಈಗಾಗಲೇ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ನಡೆಸಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು