ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ

Published 29 ಫೆಬ್ರುವರಿ 2024, 8:01 IST
Last Updated 29 ಫೆಬ್ರುವರಿ 2024, 8:01 IST
ಅಕ್ಷರ ಗಾತ್ರ

ತುಮಕೂರು: ವಿಧಾನಸೌಧದ ಕಾರಿಡಾರ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ, ಆರೋಪಿ ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು.

ಭದ್ರಮ್ಮ ವೃತ್ತದಲ್ಲಿರುವ ಬಿಜೆಪಿ ಕಚೇರಿಯಿಂದ ಬಂದ ಕಾರ್ಯಕರ್ತರು, ಸಮೀಪದಲ್ಲೇ ಇರುವ ಕಾಂಗ್ರೆಸ್ ಕಚೇರಿಗೆ ನುಗ್ಗುವ ಪ್ರಯತ್ನ ನಡೆಸಿದರು. ಮೊದಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆ ಒದಗಿಸಿದ್ದ ಪೊಲೀಸರು ತಡೆಯಲು ಮುಂದಾದರು. ಬ್ಯಾರಿಕೇಡ್‌ಗಳನ್ನು ಕಿತ್ತು ಒಳಗೆ ನುಗ್ಗುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ, ವಾಗ್ವಾದ ನಡೆಯಿತು. ಕೊನೆಗೂ ಒಳಗೆ ನುಗ್ಗದಂತೆ ಪೊಲೀಸರು ತಡೆದರು.

ಸಂಸದ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರಿನ ಬಿ.ಎಚ್.ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರ, ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರೋಪಿ ಬಂಧನಕ್ಕೆ ಒತ್ತಾಯಿಸಿದರು. ನಂತರ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ‘ಪ್ರಜಾಪ್ರಭುತ್ವದ ದೇವಸ್ಥಾನವಾದ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ಇದೊಂದು ಅವಮಾನಕರ ಘಟನೆ. ನಮ್ಮ ಮನೆಯಲ್ಲೇ ಶತ್ರುಗಳನ್ನು ಇಟ್ಟುಕೊಂಡು ಹೋರಾಟ ಮಾಡುವಂತ ಸ್ಥಿತಿ ಬಂದಿದೆ. ಇಂತಹ ದೇಶದ್ರೋಹಿಗಳನ್ನು ಹಿಡಿದು ಒಳಗೆ ಹಾಕಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಡೆಸುವ ದೌರ್ಜನ್ಯಕ್ಕೆ ನಾವು ಹೋರಾಟ ಮಾಡಬೇಕಾಗಿ ಬಂದಿದೆ. ನಮ್ಮ ಹಿರಿಯರು ಸಾಕಷ್ಟು ಸಂಕೋಲೆಗಳನ್ನು ಅನುಭವಿಸಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ಇಲ್ಲಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವಂತ ಘಟನೆಗಳು ನಡೆಯುತ್ತಿವೆ. ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಆರೋಪಿ ಬಂಧಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡರಾದ ಹನುಮಂತರಾಜು, ಎಚ್.ಎನ್.ಚಂದ್ರಶೇಖರ್, ಬ್ಯಾಟರಂಗೇಗೌಡ, ಪ್ರೇಮಾ ಹೆಗಡೆ, ಎಸ್.ಪಿ.ಚಿದನಂದ್, ಬಿ.ಜಿ.ಕೃಷ್ಣಪ್ಪ, ಮಲ್ಲಿಕಾರ್ಜುನ್, ಸಿ.ಎನ್.ರಮೇಶ್, ವಿಷ್ಣುವರ್ಧನ್, ಮಂಜುನಾಥ್, ರುದ್ರೇಶ್, ರವೀಶಯ್ಯ, ಗಣೇಶ್, ವಿರೂಪಾಕ್ಷಪ್ಪ, ಚೇತನ್, ಕೆ.ವೇದಮೂರ್ತಿ, ಧನುಷ್, ಸತ್ಯಮಂಗಲ ಜಗದೀಶ್, ಬನಶಂಕರಿ ಬಾಬು, ಕೋಮಲಾ, ಜ್ಯೋತಿ, ರಾಧಾ ಮೊದಲಾದವರು ಭಾಗವಹಿಸಿದ್ದರು.

ತುಮಕೂರಿನ ಕಾಂಗ್ರೆಸ್ ಕಚೇರಿ ಮುಂಭಾಗ ಬಿ.ಎಚ್.ರಸ್ತೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ತುಮಕೂರಿನ ಕಾಂಗ್ರೆಸ್ ಕಚೇರಿ ಮುಂಭಾಗ ಬಿ.ಎಚ್.ರಸ್ತೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಡಿವೈಎಸ್‌ಪಿ ಮೇಲೆ ಹಲ್ಲೆ

ಕಾಂಗ್ರೆಸ್ ಕಚೇರಿಗೆ ನುಗ್ಗುವುದನ್ನು ತಡೆಯಲು ಮುಂದಾದ ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಮೂಗಿಗೆ ಗಾಯವಾಗಿ ರಕ್ತ ಸೋರಿತು.

ಕಾಂಗ್ರೆಸ್ ಕಚೇರಿ ಮುಂಭಾಗ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಒಳಗೆ ನುಗ್ಗದಂತೆ ತಡೆಯಲು ಪೊಲೀಸರು ಸಜ್ಜಾಗಿದ್ದರು. ಒಮ್ಮೆಲೆ ನುಗ್ಗಿದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಮುಂದೆ ಸಾಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದ್ದು ಕಾರ್ಯಕರ್ತರೊಬ್ಬರು ಪಕ್ಷದ ಬಾವುಟ ಹಿಡಿದಿದ್ದ ಕಡ್ಡಿಯಿಂದ ಚಂದ್ರಶೇಖರ್ ಮೂಗಿನ ಮೇಲೆ ಗುದ್ದಿದ್ದಾರೆ. ಮೂಗಿನಿಂದ ರಕ್ತ ಸೋರಿದ್ದು ಗಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT