ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು | ಅಭಿವೃದ್ಧಿ ಮಂತ್ರ ಜಪಿಸಿದ ಜೆ.ಪಿ. ನಡ್ಡಾ

ತಿಪಟೂರಿನಲ್ಲಿ ಅದ್ದೂರಿ ಬಿಜೆಪಿ ಜನ ಸಂಕಲ್ಪ ಯಾತ್ರೆ
Last Updated 19 ಮಾರ್ಚ್ 2023, 8:08 IST
ಅಕ್ಷರ ಗಾತ್ರ

ತಿಪಟೂರು: ‘ಮುಂಬರುವ ವಿಧಾನ ಸಭಾ ಚುನಾವಣೆಯು ಕರ್ನಾಟಕದ ಜನತೆಯ ಭವಿಷ್ಯ ನಿರ್ಧರಿಸಲಿದೆ. ಭ್ರಷ್ಟಾಚಾರ, ಅಪರಾಧೀಕರಣ, ಕಮಿಷನ್ ದಂಧೆಯ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕಾಲ ಬಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ನಗರದ ಬಂಡಿಹಳ್ಳಿ ಗೇಟ್‍ನಿಂದ ಸಿಂಗ್ರಿ ನಂಜಪ್ಪ ವೃತ್ತದವರೆಗೆ ಶನಿ ವಾರ ನಡೆದ ಬಿಜೆಪಿ ಜನ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದರು.

ಬಿಜೆಪಿಯ ರೋಡ್ ಶೋ ಇಂದು ಜನರ ಸಭೆಯಾಗಿ ಪರಿವರ್ತನೆಯಾಗಿದೆ. ಜನರ ಮಾತು ಸತ್ಯವಾಗಿದೆ. ಕಮಲದಿಂದ ಕಮಲವೇ ಅರಳುತ್ತದೆ. ಕಮಲ ಅರುಳುವುದು ಬಿಜೆಪಿಗಷ್ಟೇ ಅವಶ್ಯಕತೆಯಲ್ಲ. ಇಡೀ ಕರ್ನಾಟಕ ಪುಣ್ಯಭೂಮಿಯ ಜನತೆ ಹಾಗೂ ಅಭಿವೃದ್ಧಿಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಅವರು ಗ್ರಾಮೀಣ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಉಚಿತವಾಗಿ ಆಹಾರದ ಧಾನ್ಯ ನೀಡಿದ್ದಾರೆ. ಕರ್ನಾಟಕದಲ್ಲಿ 4 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಪ್ರತಿ ನಾಲ್ಕು ತಿಂಗಳಿಗೆ ₹ 2 ಸಾವಿರದಂತೆ ದೇಶದ 11 ಕೋಟಿಗೂ ಹೆಚ್ಚು ರೈತರಿಗೆ ಸೌಲಭ್ಯ ಸಿಕ್ಕಿದೆ. ಕರ್ನಾಟಕದಲ್ಲಿ 57 ಲಕ್ಷ ರೈತರಿಗೆ ಯೋಜನೆಯಡಿ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ವಂಶ ಪಾರಂಪರ್ಯದ ಪಕ್ಷ. ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಲಿದೆ. ಕಾಂಗ್ರೆಸ್ ಸರ್ಕಾರದ 70 ವರ್ಷದ ಅವಧಿಯಲ್ಲಿ 79 ಏರ್‌ಪೋರ್ಟ್‍ಗಳಷ್ಟೇ ನಿರ್ಮಾಣವಾಗಿದ್ದವು. ಒಂಬತ್ತು ವರ್ಷದಲ್ಲಿ 74 ಏರ್‌ಪೋರ್ಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಕರ್ನಾಟಕ ದಲ್ಲಿ 11 ಏರ್‌ಪೋರ್ಟ್‍ಗಳು ನಿರ್ಮಾಣ ವಾಗುತ್ತಿವೆ ಎಂದು ತಿಳಿಸಿದರು.

ಕಾಂಗ್ರೆಸ್‍ ಸಂಪೂರ್ಣ ನಿರ್ನಾಮದ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಇಂಗ್ಲೆಂಡ್‌ನಲ್ಲಿ ಭಾರತದ ಪ್ರಭಾಪ್ರಭುತ್ವಕ್ಕೆ ಅಪಾಯ ಇದೆ ಎನ್ನುತ್ತಾರೆ. ಚುನಾವಣೆಯಲ್ಲಿ ಸೋತರೆ ಪ್ರಜಾಪ್ರಭುತ್ವ ಸರಿಯಿಲ್ಲ; ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ. ಭಾರತದ ಪ್ರಜಾಪ್ರಭುತ್ವ ಉಳಿಸಲು ಇಂಗ್ಲೆಂಡ್‌ನಲ್ಲಿ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳ ಸಹಾಯ ಕೇಳುತ್ತಿದ್ದಾರೆ. ಇಂತಹವರನ್ನು ರಾಜಕಾರಣದಲ್ಲಿ ಉಳಿಸಬೇಕಾ? ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಿ ಮನೆಯಲ್ಲಿ ಕೂರಿಸಬೇಕು. ಇದೇ ಅವರಿಗೆ ನೀಡುವ ಸರಿಯಾದ ಉತ್ತರ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಕೆಲವರು ತಿರುಕನ ಕನಸು ಕಾಣುತ್ತಿದ್ದು ನಾವೇ ಮುಖ್ಯಮಂತ್ರಿ ಆಗಲಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ರ‍್ಯಾಲಿಯಲ್ಲಿ ಸೇರುವ ಜನರನ್ನು ನೋಡಿ ಕಾಂಗ್ರೆಸ್ ಕಂಗಾಲಾಗಿದೆ’ ಎಂದು ಲೇವಡಿ ಮಾಡಿದರು.

ತಿಪಟೂರಿನಲ್ಲಿ ಬಿ.ಸಿ. ನಾಗೇಶ್ ಜನಪ್ರಿಯತೆಗೆ ರ‍್ಯಾಲಿ ಸಾಕ್ಷಿಯಾಗಿದೆ. ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಕೊಡುಗೆ ನೀಡಬೇಕು ಎಂದು ಕೋರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಪಿ.ಸಿ. ಮೋಹನ್, ಸಚಿವರಾದ ಆರ್. ಅಶೋಕ, ಬಿ.ಸಿ. ನಾಗೇಶ್, ಮುಖಂಡ ರಾದ ಎಂ.ಬಿ. ನಂದೀಶ್, ಸೊಗಡು ಶಿವಣ್ಣ, ಎಂ.ಡಿ. ಲಕ್ಷ್ಮೀನಾರಾಯಣ್, ಸಚ್ಚಿದಾನಂದ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT