ಗುರುವಾರ , ಆಗಸ್ಟ್ 11, 2022
21 °C

ಬಿಎಲ್‌ಒ ಬದಲಾವಣೆ: ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಹುದ್ದೆಯಿಂದ ತಮ್ಮನ್ನು ಬದಲಾವಣೆ ಮಾಡಿದ್ದಕ್ಕೆ ಆಕ್ರೋಶಗೊಂಡ ಗಾಯತ್ರಿ ಎಂಬುವವರು ಪತಿ, ಪುತ್ರನ ಜತೆ ಬಂದು ತಹಶೀಲ್ದಾರ್ ಜತೆ ಜಟಾಪಟಿ ನಡೆಸಿರುವ ಪ್ರಸಂಗ ಗುರುವಾರ ನಡೆದಿದೆ.

ಗಾಯತ್ರಿ ತಾಲ್ಲೂಕಿನ ಹಂಚಿಪುರ ಮತಗಟ್ಟೆ ಅಧಿಕಾರಿಯಾಗಿ ಹತ್ತು ವರ್ಷದಿಂದ ಕೆಲಸ ‌ನಿರ್ವಹಿಸುತ್ತಿದ್ದರು. ಅವರ ಪತಿ ಶ್ರೀನಿವಾಸ್ ಗ್ರಾಮಪಂಚಾಯಿತಿ ಸದಸ್ಯರಾಗಿದ್ದರು. ಗಾಯತ್ರಿ ಅವರ ಬಗ್ಗೆ ದೂರು ಬಂದ ಕಾರಣ ಅವರನ್ನು ತಹಶೀಲ್ದಾರ್ ವಿಶ್ವನಾಥ್ ಬದಲಾವಣೆ ಮಾಡಿದ್ದರು. ಆ ಸ್ಥಾನಕ್ಕೆ ಆಶಾ ಕಾರ್ಯಕರ್ತೆ ಸಾವಿತ್ರಿ ಅವರನ್ನು ನೇಮಕಮಾಡಿದ್ದರು.

ಗಾಯತ್ರಿ, ಸಾವಿತ್ರಿ ಅವರಿಗೆ ಅಧಿಕಾರ ವಹಿಸಿಕೊಡಲು ನಿರಾಕರಿಸಿದ್ದರು. ಇದರಿಂದ ಗ್ರಾಮಪಂಚಾಯಿತಿ ಚುನಾವಣೆ ಕಾರ್ಯಕ್ಕೆ ಅಡ್ಡಿ ಆಗುತ್ತದೆ ಎಂದು ಗಾಯತ್ರಿಗೆ ನೋಟಿಸ್ ನೀಡಲಾಗಿತ್ತು. ಇದರಿಂದಾಗಿ ಮತ್ತಷ್ಟು ಕುಪಿತರಾದ ಗಾಯತ್ರಿ, ಪತಿ, ಪುತ್ರ ಮತ್ತು ಇತರರ ಜತೆ ತಹಶೀಲ್ದಾರ್ ನಿವಾಸಕ್ಕೆ ತೆರಳಿದ್ದಾರೆ. ಕೊರೊನಾ ಸೋಂಕಿನ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ತಹಶೀಲ್ದಾರ್ ವಿಶ್ವನಾಥ್ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.

ನಾನು ಕೊರೊನಾದಿಂದ ಬಳಲುತ್ತಿದ್ದು ಕಚೇರಿಗೆ ಬರಲು ಸಾಧ್ಯವಾಗದ ಬಗ್ಗೆ ತಹಶೀಲ್ದಾರ್ ವಿವರಿಸಿದ್ದಾರೆ. ಆಗ ಗಾಯತ್ರಿ, ಶ್ರೀನಿವಾಸ್ ಮತ್ತು ರಣಜಿತ್ ತಹಶೀಲ್ದಾರ್ ಜತೆ ಮಾತಿನ ಚಕಮಕಿ ನಡೆಸಿದ್ದಾರೆ.

ತಹಶೀಲ್ದಾರರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಜೆಡಿಎಸ್ ಮುಖಂಡ ಬಿ.ಎನ್.ರವಿ ಮಧ್ಯಪ್ರವೇಶಿಸಿ ವಿವಾದ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. 

‘ನನ್ನ ಪತಿ ಕಳೆದ ಹತ್ತು ವರ್ಷದಿಂದ ಪಂಚಾಯಿತಿ ಸದಸ್ಯರಾಗಿದ್ದರು. ಈಗ ಮಗ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾನೆ. ಚನ್ನಪ್ಪ ಎಂಬುವವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಶಾಸಕರ ಮೇಲೆ ಪ್ರಭಾವ ಬೀರಿ ನನ್ನ ಬದಲಿಸಿದ್ದಾರೆ’ ಎಂದು ಗಾಯತ್ರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು