ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಭಾಗದ ಕಾಲೇಜಿಗೆ ಉಪನ್ಯಾಸಕರೇ ಇಲ್ಲ!

Published 22 ಫೆಬ್ರುವರಿ 2024, 5:27 IST
Last Updated 22 ಫೆಬ್ರುವರಿ 2024, 5:27 IST
ಅಕ್ಷರ ಗಾತ್ರ

ಕೊರಟಗೆರೆ: ಗಡಿನಾಡ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸದ ಕಾರಣ ದಾಖಲಾತಿ ಕಡಿಮೆಯಾಗಿ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಸೌಲಭ್ಯ ವಂಚಿತ ಕಾಲೇಜುಗಳಲ್ಲಿ ತಾಲ್ಲೂಕಿನ ಗಡಿಭಾಗದ ಬೊಮ್ಮಲದೇವಿಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡ ಒಂದಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಪ್ರಥಮ ವರ್ಷದ ಪಿಯು ಪರೀಕ್ಷೆ ಈಗಾಗಲೇ ಪ್ರಾರಂಭವಾಗಿ ಇನ್ನೇನು ಮುಗಿಯಲಿದೆ. ಆದರೆ ಇಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ಮೂರು ವಿಷಯಗಳಿಗೆ ಬೋಧನೆಯೇ ಸರಿಯಾಗಿ ನಡೆದಿಲ್ಲ ಎಂಬ ಆರೋಪ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದೆ.

ಬೊಮ್ಮಲದೇವಿಪುರ ತಾಲ್ಲೂಕಿನ ಗಡಿಭಾಗದ ಗ್ರಾಮ. ಗ್ರಾಮ ಪಂಚಾಯಿತಿ ಕಚೇರಿ ಕೂಡ ಶಾಲಾ, ಕಾಲೇಜಿಗೆ ಹೊಂದಿಕೊಂಡಂತಿದೆ. ಸ್ಥಳೀಯರ ಹಲವು ವರ್ಷಗಳ ಹೋರಾಟದ ಫಲವಾಗಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಒಂದೇ ಬಾರಿಗೆ ಸರ್ಕಾರ ಮಂಜೂರು ಮಾಡಿತು.

ಕಾಲೇಜಿನಲ್ಲಿ ಪ್ರಸ್ತುತ ಕಲಾ ಹಾಗೂ ವಾಣಿಜ್ಯ ವಿಭಾಗ ಇದೆ. ಪ್ರಥಮ ಪಿಯುಸಿಯಲ್ಲಿ 36, ದ್ವಿತೀಯ ಪಿಯುಸಿಯಲ್ಲಿ 33 ವಿದ್ಯಾರ್ಥಿಗಳು ಇದ್ದಾರೆ. ಪ್ರಾರಂಭದಲ್ಲಿ ಕಟ್ಟಡ ಹಾಗೂ ಇನ್ನಿತರೆ ಸಮಸ್ಯೆಯನ್ನು ಬಹಳ ವರ್ಷಗಳ ಕಾಲ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಅನುಭವಿಸಬೇಕಾಯಿತು. ಆದರೂ ಶೈಕ್ಷಣಿಕವಾಗಿ ಪ್ರತೀ ವರ್ಷ ಉತ್ತಮವಾದ ಫಲಿತಾಂಶ ಕಾಲೇಜು ನೀಡುತ್ತಿದೆ. ಈಗ ಕಟ್ಟಡ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಆದರೆ ಪಾಠ, ಪ್ರವಚನಕ್ಕೆ ಉಪನ್ಯಾಸಕರೆ ಇಲ್ಲವಾಗಿದ್ದಾರೆ. ಕಳೆದ ಐದಾರು ತಿಂಗಳ ಹಿಂದೆ ನಡೆದ ವರ್ಗಾವಣೆಯಲ್ಲಿ ಇಲ್ಲಿನ ಉಪನ್ಯಾಸಕರು ಬೇರೆಡೆ ವರ್ಗಾವಣೆಯಾಗಿದ್ದಾರೆ. ಇಂಗ್ಲಿಷ್, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ವಿಷಯಗಳಿಗೆ ಈಗ ಉಪನ್ಯಾಸಕರೇ ಇಲ್ಲ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಉಪನ್ಯಾಸಕರು ವರ್ಗಾವಣೆಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರಿಂದ ಪಾಠ ಮಾಡಲಾಗಿದೆ.

ಕಾಲೇಜಿಗೆ ಮುಂಜೂರಾಗಿದ್ದ ವಿಜ್ಞಾನ ವಿಭಾಗ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಮುಚ್ಚಬೇಕಾಯಿತು. ಇಲ್ಲಿ ಕಾಲೇಜು ಮೂಲ ಸೌಲಭ್ಯದ ಕೊರತೆ ಒಂದೆಡೆಯಾದರೆ ಇದು ಗಡಿಭಾಗದ ಕಾಲೇಜು ಆಗಿರುವ ಕಾರಣ ಸಾರಿಗೆ ಸೌಲಭ್ಯಗಳೇ ಇಲ್ಲ. ಇಂದಿಗೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಾಲ್ನಡಿಗೆ ಇಲ್ಲವೇ ದ್ವಿಚಕ್ರವಾಹನ, ಆಟೊಗಳಲ್ಲಿ ಸಂಚರಿಸಬೇಕಾದ ಅನಿವಾರ್ಯ ಇದೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ಈ ಭಾಗದ ಗಡಿ ಶಾಲೆ, ಕಾಲೇಜಿಗೆ ಬರುವ ಶಿಕ್ಷಕರು ಓಡಾಡಲು ತೊಂದರೆ ಅನುಭವಿಸಿ ಕೆಲವೇ ವರ್ಷಗಳಲ್ಲಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT