ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಸರ್ಕಾರ ದಿವಾಳಿ: ಯಡಿಯೂರಪ್ಪ ವಾಗ್ದಾಳಿ

Published 7 ನವೆಂಬರ್ 2023, 5:06 IST
Last Updated 7 ನವೆಂಬರ್ 2023, 5:06 IST
ಅಕ್ಷರ ಗಾತ್ರ

ತುಮಕೂರು: ಜನರಿಗೆ ‘ಉಚಿತ ಭಾಗ್ಯ’ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸೋಮವಾರ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಬೆಳ್ಳಾವಿ, ಗುಬ್ಬಿ ತಾಲ್ಲೂಕಿನ ಚೇಳೂರು ಮತ್ತಿತರ ಕಡೆಗಳಲ್ಲಿ ಬರ ಅಧ್ಯಯನದ ನಂತರ ರೈತರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಬರ ಅಧ್ಯಯನ ಮಾಡುವುದಾಗಿ ಹೇಳಿದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಹಗುರವಾಗಿ ಮಾತನಾಡಿ ಟೀಕಿಸಿದರು. ಆದರೆ ಹಳ್ಳಿಗೆ ಬಂದು ಅವರು ವಸ್ತುಸ್ಥಿತಿ ನೋಡಲಿಲ್ಲ. ರೈತರ ಕಷ್ಟ ಕೇಳಲಿಲ್ಲ. ನನ್ನ ವಿರುದ್ಧ ಟೀಕೆ ಮಾಡುವುದು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ. ವಿಧಾನಸೌಧದಲ್ಲಿ ಕುಳಿತು ತುಘಲಕ್ ದರ್ಬಾರ್ ಮಾಡ್ತಿದ್ದಾರೆ’ ಎಂದು ಕುಟುಕಿದರು.

ಬರದಿಂದ ರೈತರು ತತ್ತರಿಸಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರ ಬದುಕಿದೆಯೊ, ಸತ್ತಿದೆಯೊ ಎಂಬುದು ಗೊತ್ತಾಗುತ್ತಿಲ್ಲ. ಇಂತಹ ಸಮಯದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು, ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸಿದ್ದಾರೆ. ಜನರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಟೀಕಿಸಿದರು.

ಪರಿಶಿಷ್ಟ ಸಮುದಾಯದವರ ಅಂತ್ಯಕ್ರಿಯೆಗೆ ಕೊಟ್ಟ ಚೆಕ್‌ಗಳು ನಗದಿಲ್ಲದೆ ವಾಪಸಾಗುತ್ತಿವೆ. ಅಷ್ಟರ ಮಟ್ಟಿಗೆ ಸರ್ಕಾರದ ಬಳಿ ಹಣವಿಲ್ಲದೆ ದಿವಾಳಿಯಾಗಿದೆ. ಕೃಷಿ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಕೊಡುತ್ತಿದ್ದ ₹6 ಸಾವಿರದ ಜತೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ₹4 ಸಾವಿರ ಸೇರಿಸಿ ₹10 ಸಾವಿರ ಕೊಡಲಾಗುತಿತ್ತು. ಕಾಂಗ್ರೆಸ್ ಸರ್ಕಾರ ₹4 ಸಾವಿರ ಕೊಡುವುದನ್ನು ನಿಲ್ಲಿಸಿದ್ದು, ಈಗ ಬರ ಇರುವುದರಿಂದ ಈ ಹಣವನ್ನೂ ಕೊಡಬೇಕು. ಕೇಂದ್ರ ಸರ್ಕಾರ ಬರ ಪರಿಹಾರ ಕೊಡದೆ ಎಲ್ಲೂ ಹೋಗುವುದಿಲ್ಲ. ಅದಕ್ಕೂ ಮೊದಲು ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಭಾಗ್ಯಲಕ್ಷ್ಮಿ ಯೋಜನೆಯಲ್ಲೂ ಕೊಡಲು ಹಣ ಇಲ್ಲವಾಗಿದೆ. ಶಾಲಾ ಮಕ್ಕಳಿಗೆ ಸೈಕಲ್ ಕೊಡುವುದನ್ನು ನಿಲ್ಲಿಸಲಾಗಿದೆ. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಅತ್ತ ಕಡೆಗೆ ಗಮನ ಹರಿಸುತ್ತಿಲ್ಲ. ರಾಗಿ ಬೆಳೆದ ರೈತ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತಿದೆ. ಆದರೆ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಇಡೀ ರಾಜ್ಯ ಸುತ್ತಾಡಿ ಜನರ ಸಂಕಷ್ಟ ಅರಿತು ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಗಾಳಿಯೂ ಬೀಸುತ್ತಿಲ್ಲ: ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಮಳೆಯೂ ಆಗುತ್ತಿಲ್ಲ, ಗಾಳಿಯೂ ಬೀಸುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು. ಮಳೆ ಇಲ್ಲದೆ ಜಲಾಶಯಗಳು ಬರಿದಾಗಿದ್ದು, ವಿದ್ಯುತ್ ಉತ್ಪಾದನೆ ಕುಸಿದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಗಾಳಿಯೂ ಬೀಸುತ್ತಿಲ್ಲ. ಜನರಿಗೆ ಉಚಿತ ಭಾಗ್ಯಗಳ ಜತೆಗೆ ಕತ್ತಲೆ ಭಾಗ್ಯ ಕರುಣಿಸಿದ್ದಾರೆ ಎಂದು ಟೀಕಿಸಿದರು.

ಬಡವರಿಗೆ ಉಚಿತ ವಿದ್ಯುತ್ ಕೊಡುವುದು ಬಿಟ್ಟು, ಶ್ರೀಮಂತರಿಗೂ ಕೊಡಲಾಗಿದೆ. ಹಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ಸಿಗುತ್ತಿದ್ದರೆ, ಈಗ 3 ಗಂಟೆಯೂ ಕೊಡುತ್ತಿಲ್ಲ. ಉಚಿತ ಕೊಡುಗೆ ಹೆಸರಿನಲ್ಲಿ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಕಿತ್ತು ಹಾಕುವವರೆಗೂ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಎಸ್.ಪಿ.ಮುದ್ದಹನುಮೇಗೌಡ, ಬಿ.ಸಿ.ನಾಗೇಶ್, ರಾಜೇಶ್‌ಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಎನ್.ಬಿ.ನಂದೀಶ್, ವೈ.ಎಚ್.ಹುಚ್ಚಯ್ಯ ಮೊದಲಾದವರು ನಿಯೋಗದಲ್ಲಿ ಇದ್ದರು.

ಇಬ್ಬರು ಸಚಿವರು ಎಲ್ಲಿದ್ದಾರೆ?
ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದಾರೆ. ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು. ಸಚಿವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಬರದಿಂದ ತತ್ತರಿಸಿರುವ ರೈತರ ಸಂಕಷ್ಟ ಕೇಳುತ್ತಿಲ್ಲ. ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸಿದ್ದಾರೆ. ವಿದ್ಯುತ್ ಸಮಸ್ಯೆ ಬಗ್ಗೆ ಉದ್ಯಮಿಗಳ ಜತೆಗೆ ಚರ್ಚಿಸಿ ಪರಿಹಾರ ಕಂಡುಕೊಂಡಿಲ್ಲ. ಜಿಲ್ಲೆಯ ಜನರಿಗೆ ಸ್ಪಂದಿಸದ ಮೇಲೆ ಇಬ್ಬರು ಸಚಿವರು ಏಕೆ ಬೇಕು ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT