ತಿಪಟೂರು: ತಾಲ್ಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ವಿದ್ಯಾರ್ಥಿ ನಿಲಯ, ಕರಡಿ, ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ನಗರ ಪೊಲೀಸ್ ಠಾಣೆಗೆ ರಾಜ್ಯ ಮಕ್ಕಳ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಕೃಷಿ ಹೊಂಡಗಳ ಸುತ್ತಲೂ ರಕ್ಷಣೆ ಬೇಲಿ ನಿರ್ಮಿಸಬೇಕು. ಶಾಲಾ ಆವರಣದಲ್ಲಿ ವಿದ್ಯುತ್ ತಂತಿಯನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಪೋಲೀಸ್ ಇಲಾಖೆಯಲ್ಲಿ ಪ್ರತಿ ಗುರುವಾರ ಕಡ್ಡಾಯವಾಗಿ ತೆರದ ಮನೆ ಕಾರ್ಯಕ್ರಮ ಆಯೋಜಿಸಬೇಕು. ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಸಭೆಗೆ ಬೀಟ್ ಪೋಲೀಸ್ ಸಿಬ್ಬಂದಿ ಹಾಜರಾಗಿ, ಶನಿವಾರ ಭಾನುವಾರ ಶಾಲೆಗಳ ಆವರಣಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ತೆಂಗಿನ ಕಾಯಿ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರಿದ್ದು ಪರಿಶೀಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ರಸ್ತೆಗಳಲ್ಲಿ ಸೂಚನಾ ಫಲಕ, ಉಬ್ಬು ಅಳವಡಿಸಿ ಮಕ್ಕಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಶಿಕ್ಷಣ ಕಾರ್ಯಪಡೆ, ರಕ್ಷಣಾ ಸಮಿತಿ, ಫೇಸ್‌ಬುಕ್ ಫೇಜ್ ಸೃಷ್ಟಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಮಕ್ಕಳ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ತಹಶೀಲ್ದಾರ್ ಪವನ್‌ಕುಮಾರ್, ತಾಪಂ ಇಒ ಸುದರ್ಶನ್, ಬದುಕು ಸಂಸ್ಥೆ ನಿರ್ದೇಶಕ ನಂದಕುಮಾರ್, ಗ್ರೇಡ್–2 ತಹಶೀಲ್ದಾರ್ ಜಗನ್ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಸಿಡಿಪಿಒ ಲೋಕೇಶ್, ಹಿಂದುಳಿದ ವರ್ಗಗಳ ಆಧಿಕಾರಿ ಜಲಕ್ಷಾಮ್ಮ, ತೋಟಗಾರಿಕೆ ಇಲಾಖೆ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಹಾಜರಿದ್ದರು.