ಭಾನುವಾರ, ಜೂನ್ 26, 2022
21 °C
ವರ್ಷಕ್ಕೊಮ್ಮೆ ದ್ವಾರಾಳು ಗ್ರಾಮಕ್ಕೆ ಭೇಟಿ l ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಟ್ರಸ್ಟ್‌ ಮೂಲಕ ನೆರವು

ಚಂದ್ರ ಕನ್ನಡಾಭಿಮಾನಕ್ಕೆ ಗ್ರಾಮಸ್ಥರ ಹೆಮ್ಮೆ

ಮೈಲಾರಿ ಲಿಂಗಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಚಂದ್ರ ಆರ್ಯ ಅವರ ಸರಳತೆ, ತನ್ನೂರಿನ ಪ್ರೀತಿ, ಕನ್ನಡ ಭಾಷೆಯ ಅಭಿಮಾನ ಕೆನಡಾದ ಸಂಸತ್ ಭವನದಲ್ಲಿ ಕನ್ನಡದ ಕಂಪು ಹರಡುವಂತೆ ಮಾಡಿದೆ.

– ಹೀಗೆಂದು ಅಭಿಮಾನದ ಮಾತುಗಳನ್ನಾಡಿದವರು ಕೆನಡಾದ ಸಂಸದ ಚಂದ್ರ ಆರ್ಯ ಅವರ ಬಾಲ್ಯದ ಸ್ನೇಹಿತ ದಯಾನಂದ್‌.

ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದ ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರ ಮೇಲಿನ ಅಭಿಮಾನ ಊರಿನಲ್ಲಿ ಮತ್ತಷ್ಟು ಹೆಚ್ಚಾಗಿದೆ. ಸುಮಾರು 150 ಮನೆಗಳಿರುವ ಪುಟ್ಟ ಹಳ್ಳಿ ದ್ವಾರಾಳು. ವ್ಯವಸಾಯ ಕುಟುಂಬದಲ್ಲಿ ಹುಟ್ಟಿದ ಆರ್ಯ ಅವರು ಕೆನಡಾ ಸಂಸತ್ ಪ್ರವೇಶಿಸುವವರೆಗಿನ ಪಯಣ ಅದ್ಭುತ. ಅವರು ಊರಿಗೆ ಬಂದಾಗ ಪ್ರತಿ ಬಾರಿ ನಮ್ಮೊಂದಿಗೆ ಸಮಯ ಕಳೆಯುತ್ತಾರೆ. ಬಾಲ್ಯದಲ್ಲಿ ಹೇಗಿದ್ದರೊ, ಇಂದಿಗೂ ಹಾಗೆಯೇ ನಡೆದುಕೊಳ್ಳುತ್ತಾರೆ. ಅವರು ಇತರರಿಗೆ ಮಾದರಿ ಎಂದು ದಯಾನಂದ್‌ ನೆನಪಿಸಿಕೊಂಡರು.

ವಿದ್ಯಾಭ್ಯಾಸ: ಆರ್ಯ ಅವರು ದ್ವಾರಾಳುವಿನಲ್ಲಿ ಹುಟ್ಟಿದರೂ ಹೆಚ್ಚು ಕಾಲ ಗ್ರಾಮದಲ್ಲಿ ಉಳಿಯಲಿಲ್ಲ. ಅವರ ತಂದೆ ಗೋವಿಂದಪ್ಪ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಾರಣ ಚಿಕ್ಕ ವಯಸ್ಸಿನಲ್ಲೇ ಹುಟ್ಟೂರು ಬಿಡಬೇಕಾಯಿತು. ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲಿ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮುಗಿಸಿ, ಬಳ್ಳಾರಿಯ ಮುನ್ಸಿಪಲ್ ಕಾಲೇಜಿನಲ್ಲಿ ಪಿಯುಸಿ ಓದಿದರು. ರಾಮನಗರದಲ್ಲಿ ಎಂಜಿನಿಯರಿಂಗ್ ಪೂರೈಸಿದರು.

ಬದುಕಿನ ಹಾದಿ: ಎಂಜಿನಿಯರಿಂಗ್‌ ಬಳಿಕ ಮೊದಲಿಗೆ ಭಾರತೀಯ ಸೇನೆ ಸೇರಿ ಡಿಆರ್‌ಡಿಒದಲ್ಲಿ ಕೆಲಸ ಮಾಡಿದರು. ನಂತರ ಹುದ್ದೆಗೆ ರಾಜೀನಾಮೆ ನೀಡಿ ಕೆಎಸ್‌ಎಫ್‌ಸಿಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದರು. ಅದಕ್ಕೂ ರಾಜೀನಾಮೆ ನೀಡಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಗ್ರಾನೈಟ್ ಕಾರ್ಖಾನೆ ಆರಂಭಿಸಿ ಕೈ ಸುಟ್ಟುಕೊಂಡರು. ನಂತರ ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಕಚೇರಿ ಆರಂಭಿಸಿದರು. ಒಂದಿಷ್ಟು ದಿನ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಅದೂ ಬಿಟ್ಟು ಕೆಲಸ ಅರಸಿ ದೋಹಾಗೆ ಹೊರಟರು.

ದಾಂಡೇಲಿಯ ಸಂಗೀತಾ ಅವರನ್ನು 1991ರಲ್ಲಿ ವಿವಾಹವಾದರು. ನಂತರದ ದಿನಗಳಲ್ಲಿ ಸಂಗೀತಾ ಅವರು ಉದ್ಯೋಗ ನಿಮಿತ್ತ ಕೆನಡಾಗೆ ತೆರಳಿದರು. ಇದಾದ ಕೆಲವು ದಿನಗಳ ಬಳಿಕ ಚಂದ್ರ ಕೂಡ ಕೆನಡಾ ಕಡೆ ಮುಖ ಮಾಡಿದರು. ಉತ್ತಮ ಭಾಷಾ ಜ್ಞಾನ ಮತ್ತು ಅನುಭವದಿಂದಾಗಿ ಉದ್ಯೋಗ ಪಡೆದುಕೊಂಡರು. ಸಂಗೀತಾ ಅವರು ಕೆನಡಾದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ.

ಕೆನಡಾದಲ್ಲಿ ರಾಜ್ಯೋತ್ಸವ: ಕೆನಡಾದಲ್ಲಿ ಫೈನಾನ್ಶಿಯಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಾ, ಕನ್ನಡ ಸಂಘ, ಸಂಸ್ಥೆಗಳ ಮೂಲಕ ಉತ್ತಮ ಕೆಲಸಗಳನ್ನು ಕೈಗೊಂಡು ಸಂಸತ್ತಿನವರೆಗೆ ಪ್ರಯಾಣ ಬೆಳೆಸಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಅಲ್ಲಿನ ಸಂಸತ್ ಪ್ರವೇಶಿಸಿದರು. ನಂತರ 2019ರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದರು. ಅದೇ ವರ್ಷ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದರು.

ವರ್ಷಕ್ಕೊಮ್ಮೆ ಊರಿಗೆ: ಚಂದ್ರ ಆರ್ಯ ವರ್ಷಕ್ಕೊಮ್ಮೆಯಾದರೂ ಊರಿಗೆ ಬರುತ್ತಾರೆ. ಯಾವುದೇ ಅಹಂ ಇಲ್ಲದೆ, ಎಲ್ಲರ ಜೊತೆಗೆ ಬೆರೆಯುತ್ತಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾರೆ ಎಂದು ದ್ವಾರಾಳು ಗ್ರಾಮದ ಹಾಲಪ್ಪ ಹೇಳಿದರು.

‘ಚಂದ್ರ ಅವರ ಕುಟುಂಬದ ಸದಸ್ಯರು ‘ಗಜ್ಜಿಗರಹಳ್ಳಿ ಕರಿಯಣ್ಣ ಸೇವಾ ಟ್ರಸ್ಟ್’ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷ ಅನ್ನದಾಸೋಹ ಏರ್ಪಡಿಸಲಾಗುತ್ತದೆ. ಹಲವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಅವರ ಚಿಕ್ಕಪ್ಪ ಕೆ.ತಿಮ್ಮಪ್ಪ ಮಾಹಿತಿ ನೀಡಿದರು.

ಇತಿಹಾಸ ಸೃಷ್ಟಿ

ನಮ್ಮದೇನೂ ಶ್ರೀಮಂತ ಕುಟುಂಬವಲ್ಲ. ಜೀವನ ನಿರ್ವಹಣೆಗಾಗಿ ನೌಕರಿ ಸೇರಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದೆ. ಅವರೇ ಬುದ್ಧಿವಂತರಾಗಿ ತಮ್ಮದೇ ಆದ ರೀತಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಅಲೆದಾಡಿದ್ದರಿಂದ ಚಂದ್ರ ಆರ್ಯಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಜಾಸ್ತಿ. ತನ್ನೂರಿನ ಕುರಿತು ಅಷ್ಟೇ ಒಲವಿದೆ. ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ‌.

-ಗೋವಿಂದಪ್ಪ, ಚಂದ್ರ ಆರ್ಯ ಅವರ ತಂದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು