ಶುಕ್ರವಾರ, ಫೆಬ್ರವರಿ 3, 2023
15 °C

ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿ ಬದಲು: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಅಭ್ಯರ್ಥಿಗಳನ್ನು ಕೆಲವು ಕಡೆಗಳಲ್ಲಿ ಘೋಷಿಸಿದ್ದರೂ ಇದೇ ಪಟ್ಟಿ ಅಂತಿಮವಲ್ಲ. ಕೆಲವು ಕ್ಷೇತ್ರಗಳಲ್ಲಿ ಬದಲಾಗಬಹುದು ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಂಚರತ್ನ ರಥಯಾತ್ರೆ ಸಮಯದಲ್ಲಿ ಸಿದ್ಧಗಂಗಾ ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈಗಾಗಲೇ ಪ್ರಕಟಿಸಿರುವ ಪಟ್ಟಿ ಅಂತಿಮವಲ್ಲ’ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸದು. ಕೆಲವು ಕ್ಷೇತ್ರಗಳಲ್ಲಿ ಬದಲಾಗುವ ಸಾಧ್ಯತೆಗಳಿವೆ’ ಎಂದು ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ನಮ್ಮಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದರು.

ಆರೋಗ್ಯ ಮುಖ್ಯವಲ್ಲ: ನಂತರ ಯಾತ್ರೆಯಲ್ಲಿ ಮಾತನಾಡಿ, ‘ನಾನು ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಬಳಲಿದ್ದೇನೆ. ಆದರೂ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೇನೆ. ನನ್ನ ಆರೋಗ್ಯಕ್ಕಿಂತ ಜನರ ಬದುಕು ಮುಖ್ಯ. ಅದಕ್ಕಾಗಿ ಯಾತ್ರೆ ಆರಂಭಿಸಿದ್ದೇನೆ’ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲಿ 40ರಿಂದ 50 ಸ್ಥಾನಗಳನ್ನು ಗೆಲ್ಲಲು ಕಷ್ಟ ಬೀಳಬೇಕಾಗಿಲ್ಲ. 123 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ರಚಿಸಿ, ಕೊಟ್ಟಿರುವ ‘ಪಂಚರತ್ನ’ ಭರವಸೆ ಈಡೇರಿಸಬೇಕಾಗಿದೆ. ಕಡಿಮೆ ಸ್ಥಾನಗಳನ್ನು ಗೆದ್ದು ಬಿಜೆಪಿ, ಕಾಂಗ್ರೆಸಿಗರ ಮನೆ ಬಾಗಿಲಿಗೆ ಹೋಗುವಂತೆ ಮಾಡಬೇಡಿ. ಇಬ್ಬರ ಸಹವಾಸವನ್ನು ಮಾಡಿ ಸಾಕಾಗಿದೆ. ಸ್ವತಂತ್ರವಾಗಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು