ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸೆರೆ ಹಿಡಿದಷ್ಟೂ ಪ್ರತ್ಯಕ್ಷವಾಗುತ್ತಿವೆ ಚಿರತೆ

ಜನರಲ್ಲಿ ಆತಂಕ; ಅಧಿಕಾರಿಗಳಿಗೆ ತಲೆನೋವು
Last Updated 23 ಜನವರಿ 2021, 2:04 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ವಲಯ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆಗಳು ಸೆರೆ ಹಿಡಿದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿವೆ.

ಜನರು ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಹಗಲು ರಾತ್ರಿ ನಿಗಾ ವಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಮಂಗಳವಾರ ನಿಡಸಾಲೆ ಗ್ರಾಮದ ಕೆರೆಯ ಅಂಗಳದಲ್ಲಿ ಮೇಯುತ್ತಿದ್ದ ಸಿದ್ದಲಿಂಗಯ್ಯ ಅವರ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದೆ. ಜನರ ಅಬ್ಬರಕ್ಕೆ ಹೆದರಿದ ಚಿರತೆ ಗುಂಡಿ ಜಿಗಿಯುವಾಗ ಕುರಿ ಅದರ ಬಾಯಿಂದ ಕಳಚಿ ಬಿದ್ದು ಪಾರಾಗಿದೆ.

ಗ್ರಾಮದ ಬೋಳುಗುಡ್ಡೆಯಲ್ಲಿನ ಸೀಳಿರುವ ಬಂಡೆಯ ಸಂದಿನೊಳಗೆ ತನ್ನ ಮರಿಗಳ ಜೊತೆಗೆ ಸೇರಿಕೊಂಡಿರುವ ಚಿರತೆ ಒಮ್ಮೊಮ್ಮೆ ಬಂಡೆಯ ಮೇಲೆ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ಕುಳಿತಿರುವುದನ್ನು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಜನರಿಂದ ಅಹವಾಲು ಬಂದ ಕಡೆಯೆಲ್ಲ ಬೋನು ಅಳವಡಿಸಿ ಚಿರತೆಯನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈಚೆಗೆ ಎರಡು ತಿಂಗಳ ಅಂತರದಲ್ಲಿ ರಾಜೇಂದ್ರಪುರದಲ್ಲಿ ಎರಡು, ಉಜ್ಜನಿ, ಹುನಗನಹಳ್ಳಿ, ಕೆ. ಹೊನ್ನಮಾಚನಹಳ್ಳಿ, ಸಿದ್ದಯ್ಯನಕೆರೆ ಪಾಳ್ಯ, ಹಾಗೂ ನಾಗತಿಹಳ್ಳಿಯ ಭಾಗಗಳಲ್ಲಿ ತಲಾ ಒಂದು ಚಿರತೆ ಸೆರೆ ಹಿಡಿದು ದೂರದ ರಕ್ಷಿತಾರಣ್ಯಗಳಲ್ಲಿ ಬಿಟ್ಟಿರುವುದಾಗಿ ಉಪ ವಲಯ ಅರಣ್ಯಾಧಿಕಾರಿ ಮಹೇಶ್ ಹೇಳುತ್ತಾರೆ.

ಇಷ್ಟಾದರೂ ಜನರ ಆತಂಕ ಮಾತ್ರ ದೂರವಾಗಿಲ್ಲ. ಚಿರತೆಗಳ ಉಪಟಳದಿಂದ ರಕ್ಷಣೆ ನೀಡುವಂತೆ ಇಲಾಖೆಯ ಅಧಿಕಾರಿಗಳನ್ನು ಜನರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT