ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಸಿ: ರಾಜ್ಯಕ್ಕೆ ಕೀರ್ತಿ ತಂದ ಗ್ರಾಮೀಣ ಬಾಲಕ

Last Updated 6 ಮೇ 2019, 14:51 IST
ಅಕ್ಷರ ಗಾತ್ರ

ಹುಳಿಯಾರು: ಸಿಬಿಎಸ್‌ಸಿ ಚೆನ್ನೈ ವಲಯದ ಶಾಲೆಗಳಲ್ಲಿಯೇ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ವಿದ್ಯಾವಾರಿಧಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿ ಡಿ.ಯಶಸ್ ಎಸ್ಸೆಸ್ಸೆಲ್ಸಿಯಲ್ಲಿ 500ಕ್ಕೆ 498 ಅಂಕಗಳನ್ನು ಪಡೆದಿದ್ದಾರೆ. ಈ ಶಾಲೆಯು ಮಾಜಿ ಶಾಸಕ ಕಿರಣ್‌ಕುಮಾರ್ ಒಡೆತನಕ್ಕೆ ಸೇರಿದೆ.

ಕೇವಲ ರಾಜ್ಯಮಟ್ಟಕ್ಕೆ ಮಾತ್ರ ಅಲ್ಲ. ಚೆನ್ನೈ ವಲಯದ ಶಾಲೆಗಳಲ್ಲಿಯೇ ಈ ಗ್ರಾಮೀಣ ಭಾಗದ ವಿದ್ಯಾರ್ಥಿ ಗರಿಷ್ಠ ಅಂಕಗಳಿಸಿ ಬೆರಗುಗೊಳಿಸಿದ್ದಾನೆ. ಅಲ್ಲದೇ ರಾಜ್ಯಕ್ಕೆ ಹೆಮ್ಮೆಯ ಸಾಧನೆ ಮಾಡಿದ್ದಾನೆ.

ಶೈಕ್ಷಣಿಕ ಜಿಲ್ಲೆಯ ಹೆಗ್ಗಳಿಕೆಯ ತುಮಕೂರು ಜಿಲ್ಲೆಯು ಈ ಬಾರಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆಯಲ್ಲಿ ಹಿನ್ನಡೆ ಕಂಡಿತ್ತು. ಈ ಬಾಲಕ ಸಿಬಿಎಸ್‌ಸಿ ಚೆನ್ನೈ ವಲಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಬಾಲಕನ ಗ್ರಾಮವಾಗಿದ್ದು, ತಂದೆ ದೇವರಾಜ್ ತಾಯಿ ನೇತ್ರಾವತಿ. ಕೃಷಿಯೇ ಕುಟುಂಬಕ್ಕೆ ಆಧಾರ. ಯಶಸ್ ತಂದೆ ದೇವರಾಜ್ ಅನಾರೋಗ್ಯದಲ್ಲಿದ್ದು, ಆತನ ಅಕ್ಕ ಬೆಂಗಳೂರಿನಲ್ಲಿ ಬಿ.ಇ. ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

ಬಾಲಕನ ಸಾಧನೆ

ತಿಮ್ಮನಹಳ್ಳಿಯಿಂದ ಹುಳಿಯಾರು 30 ಕಿ.ಮೀ ದೂರ. ವಿದ್ಯಾವಾರಿಧಿ ಶಾಲೆಗೆ ಬಾಲಕ ಯಶಸ್ ನಿತ್ಯ ಶಾಲಾ ವಾಹನದಲ್ಲಿ ಹೋಗಿ ಬರುತ್ತಿದ್ದ. ಪ್ರತಿ ದಿನ 60 ಕಿ.ಮೀ ಶಾಲೆಗೆ ಹೋಗಿ ಬರುವುದರಲ್ಲಿಯೇ ಹೆಚ್ಚಿನ ಸಮಯ ಕಳೆದರೂ ಉಳಿದ ಸಮಯದಲ್ಲಿ ಶ್ರಮಪಟ್ಟು ಓದಿ ಬಾಲಕ ಸಾಧನೆ ಮಾಡಿದ್ದಾನೆ.

ದಿನಕ್ಕೆ 6 ಗಂಟೆ ಮಾತ್ರ ನಿದ್ರೆ

ಹೆಮ್ಮೆ ಪಡುವ ರೀತಿ ಮಗ ಸಾಧನೆ ಮಾಡಿರುವುದು ಸಂತೋಷವಾಗಿದೆ. ಓದಿನಲ್ಲಿ ಮೊದಲಿನಿಂದಲೂ ಆತ ಮುಂದಿದ್ದ. ಸಮಯ ವ್ಯರ್ಥ ಮಾಡದೇ ಓದಿಗೆ ಬಳಸಿಕೊಳ್ಳುತ್ತಿದ್ದ. ದಿನಕ್ಕೆ 6 ತಾಸು ಮಾತ್ರ ನಿದ್ರೆ ಮಾಡುತ್ತಿದ್ದ. ಆತನ ಶ್ರಮವೇ ಫಲ ನೀಡಿದೆ ಎಂದು ಯಶಸ್ ತಾಯಿ ನೇತ್ರಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯ, ಎಂಜಿನಿಯರ್ ಇಷ್ಟವಿಲ್ಲ, ನನ್ನ ಗುರಿ ಐಐಟಿ

‘ಫಲಿತಾಂಶ ಕಂಡು ಖುಷಿಯಾಗಿದೆ. ಶಾಲೆಗಳಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠ ಗಮನವಿಟ್ಟು ಆಲಿಸುತ್ತಿದ್ದೆ. ತಿಳಿಯದ ವಿಷಯಗಳನ್ನು ಅವರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಓದಿಗೆ ನಿರ್ದಿಷ್ಟ ಸಮಯದ ಪಟ್ಟಿ ಮಾಡಿಕೊಂಡಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಓದುತ್ತಿದ್ದೆ’ ಎಂದು ವಿದ್ಯಾರ್ಥಿ ಡಿ.ಯಶಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಯುಸಿಯಲ್ಲಿ ಪಿಸಿಎಂಸಿ( ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್) ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವೈದ್ಯನಾಗಬೇಕು, ಎಂಜಿನಿಯರ್ ಆಗಬೇಕು ಎಂಬುದು ಇಷ್ಟವಿಲ್ಲ. ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಬೇಕು (ಐಐಟಿ) ಎಂಬ ಆ ಗುರಿ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT