ಗುರುವಾರ , ಫೆಬ್ರವರಿ 25, 2021
20 °C
ಹುಸಿಯಾದ ತಿನ್ನುವ ಕೊಬ್ಬರಿ ಸಂಶೋಧನಾ ಕೇಂದ್ರ ಸ್ಥಾಪನೆ, ಬೆಂಗಳೂರು–ತುಮಕೂರು ಆರು ಪಥ ಹೆದ್ದಾರಿ ನಿರ್ಮಾಣ

ಕೇಂದ್ರ ಬಜೆಟ್: ಕಮರಿದ ಕಲ್ಪತರು ನಾಡಿನ ಜನರ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ 2019–20ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ ಕಲ್ಪತರು ನಾಡಿನ ಜನರ ನಿರೀಕ್ಷೆಯನ್ನು ಕಮರಿಸಿದೆ.

ಜಿಲ್ಲೆಯ ಉದ್ಯಮಿಗಳು, ಕೆಲ ರಾಜಕಾರಣಿಗಳು, ಸಂಘ ಸಂಸ್ಥೆ, ರೈತರು ಸೇರಿದಂತೆ ಜಿಲ್ಲೆಯ ಜನರ ನಿರೀಕ್ಷೆ ಹುಸಿ ಗೊಳಿಸಿದೆ.

ಕೆಲ ತಿಂಗಳು ಹಿಂದೆ ಹಣಕಾಸು ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್‌ ಜಿಲ್ಲೆಯ ಜನರ ಹಲವು ನಿರೀಕ್ಷೆಗಳನ್ನು ಹುಸಿಗೊಳಿಸಿತ್ತು. ಈ ಬಾರಿಯ ಪೂರ್ಣ ಬಜೆಟ್‌ನಲ್ಲಿ ಆ ನಿರೀಕ್ಷೆಗಳಲ್ಲಿ ಕೆಲವಾದರೂ ಕೇಂದ್ರ ಘೋಷಣೆ ಮಾಡಬಹುದು ಎಂಬ ಆಶಯ ಹೊಂದಿದ್ದರು. ಆದರೆ, ಹಣಕಾಸು ಸಚಿವರು ‘ಕಲ್ಪತರು ನಾಡಿ’ ಗೆ ನಿರ್ದಿಷ್ಟವಾಗಿ ಯಾವೊಂದೂ ಕೊಡುಗೆಗಳನ್ನು ಘೋಷಣೆ ಮಾಡದೇ ನಿರಾಶೆಗೊಳಿಸಿದ್ದಾರೆ.

2018ರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ತಿಪಟೂರಿನಲ್ಲಿ ತೆಂಗು ಬೆಳೆಗಾರರೊಂದಿಗೆ ಸಂವಾದದಲ್ಲಿ ಭರವಸೆ ನೀಡಿದ್ದಂತೆ ತಿನ್ನುವ ಕೊಬ್ಬರಿ ಸಂಶೋಧನಾ ಕೇಂದ್ರ( ಬಾಲ್ ಕೊಪ್ರಾ) ಸ್ಥಾಪನೆ ಘೋಷಣೆಯನ್ನಾದರೂ ಹಣಕಾಸು ಸಚಿವರು ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯನ್ನು ಹೊಂದಿದ್ದರು. ಅದೂ ಕೂಡಾ ಹುಸಿಯಾಗಿದೆ.

ತುಮಕೂರು ಬೆಂಗಳೂರು ನಡುವೆ ಆರು ಪಥದ ಹೆದ್ದಾರಿ ನಿರ್ಮಾಣ, ವಸಂತನರಸಾಪುರ ಸೇರಿದಂತೆ ಕೈಗಾರಿಕೆ ಪ್ರದೇಶಕ್ಕೆ ಇನ್ನೂ ಹೆಚ್ಚಿನ ಮೂಲಸೌಕರ್ಯ, ಉದ್ಯೋಗ ಆಧಾರಿತ ಕೈಗಾರಿಕೆಗಳ ಘೋಷಣೆ, ಬೆಂಗಳೂರು– ತುಮಕೂರು ಮೆಟ್ರೊ ಯೋಜನೆ, ಬೆಂಗಳೂರು– ತುಮಕೂರು ಉಪನಗರ ರೈಲು ಸಂಚಾರ ಘೋಷಣೆ ಸೇರಿದಂತೆ ಅನೇಕ ನಿರೀಕ್ಷೆಗಳಿದ್ದವು. ಆದರೆ, ಇದರಲ್ಲಿ ಯಾವೊಂದು ಘೋಷಣೆಯಾಗಿಲ್ಲ. ಮಧ್ಯಂತರ ಬಜೆಟ್‌ನ್ನು ಲೋಕಸಭೆ ಚುನಾವಣೆ ಗುರಿಯಾಗಿಟ್ಟುಕೊಂಡು ಮಾಡಿದ್ದರು ಎಂಬ ಆರೋಪ ಇತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಸಂಸದರನ್ನಾಗಿ ಕ್ಷೇತ್ರದ ಜನರು ಆಯ್ಕೆ ಮಾಡಿದ್ದು, ಕನಿಷ್ಠ ಒಂದು ನಿರ್ದಿಷ್ಟ ಕೊಡುಗೆಯನ್ನು ಘೋಷಣೆ ಮಾಡಬಹುದಿತ್ತು. ಅದನ್ನು ಮಾಡಿಲ್ಲ ಎಂಬ ಅಸಮಾಧಾನ ಜನಮನದಲ್ಲಿ ಆವರಿಸಿದೆ.

ಅಡಿಕೆ, ತೆಂಗು ವಾಣಿಜ್ಯ ಬೆಳೆಗಳ ಮೂಲಕ ರಾಷ್ಟ್ರಮಟ್ಟದಲ್ಲಿಯೇ ಗುರುತಿಸಿಕೊಂಡ ಜಿಲ್ಲೆಗೆ ಈ ಬೆಳೆಗಾರರ ಹಿತರಕ್ಷಣೆಗೆ ಪೂರಕವಾದ ಯಾವ ಕೊಡುಗೆಗಳು ಬಜೆಟ್‌ ನಲ್ಲಿ ಇಲ್ಲ. ಬರೀ ಬರಿಗೈ ತೋರಿಸಲಾಗಿದೆ.

ಬರೀ ಕೈಗಾರಿಕೋದ್ಯಮಿಗಳನ್ನು ಮಾತ್ರ ಕಡೆಗಣಿಸಿಲ್ಲ. ರೈತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಬೇಸರ ವ್ಯಕ್ತವಾಗಿದೆ. ಹಿಂದಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ಗೂ ಈ ಬಜೆಟ್‌ಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಅದರಲ್ಲೂ ಏನು ಕೊಡುಗೆಗಳು ಜಿಲ್ಲೆಗೆ ಘೋಷಣೆಯಾಗಿರಲಿಲ್ಲ. ಈ ಪೂರ್ಣ ಬಜೆಟ್‌ನಲ್ಲೂ ಅದೇ ಪುನರಾವರ್ತನೆಯಾಗಿದೆ ಎಂದು ಜನ ವಿಶ್ಲೇಷಿಸುತ್ತಾರೆ. ವಿಶೇಷ ಆರ್ಥಿಕ ವಲಯ, ಮೂಸೌಕರ್ಯ, ಉದ್ಯಮಿಗಳಿಗೆ ಪ್ರೋತ್ಸಾಹಕ ಯೋಜನೆಯಂತಹ ಕೆಲ ಯೋಜನೆಗಳು ಸಮಗ್ರ ಯೋಜನೆಗಳಾಗಿದ್ದು, ಅವುಗಳನ್ನು ಪ್ರಯತ್ನ ಪಟ್ಟೇ ಮಂಜೂರು ಮಾಡಿಸಿಕೊಂಡು ಬರಬೇಕು. ಬಜೆಟ್‌ನಲ್ಲಿ ಜಿಲ್ಲೆಗೆ ನಿರ್ದಿಷ್ಟ ಘೋಷಣೆಯಾಗಿದ್ದರೆ ಹಕ್ಕಿನ ಮೇಲೆ ಪಡೆದುಕೊಳ್ಳಲು ಅವಕಾಶವಿರುತ್ತದೆ ಎಂಬುದು ಜನರ ವಿಶ್ಲೇಷಣೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.