ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶುಪಾಲನೆ ರಜೆ: ಎಚ್ಚರಿಕೆಯಿಂದ ಬಳಸಿ

Last Updated 13 ಆಗಸ್ಟ್ 2021, 4:04 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ನೀಡಿರುವ ಶಿಶುಪಾಲನೆ ರಜೆಯನ್ನು ಎಚ್ಚರಿಕೆಯಿಂದ ಬಳಸಬೇಕು. ಅನಗತ್ಯವಾಗಿ ರಜೆ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಸಲಹೆ ಮಾಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ನೌಕರರಲ್ಲಿ ಶೇ 60ರಷ್ಟು ಮಹಿಳಾ ನೌಕರರು ಇದ್ದಾರೆ. ತಮ್ಮ ಮಕ್ಕಳ ಪಾಲನೆಗಾಗಿ ವರ್ಷದಲ್ಲಿ 180 ದಿನಗಳ ಶಿಶುಪಾಲನಾ ರಜೆ ನೀಡಲಾಗಿದೆ. ಈ ರಜೆಯನ್ನು ಮಹಿಳಾ ನೌಕರರು ವಿವೇಚನೆಯಿಂದ ಬಳಕೆ ಮಾಡಬೇಕು. ಅನಗತ್ಯವಾಗಿ ರಜೆ ಹಾಕಿ ಕೆಲಸಕ್ಕೆ ತೊಂದರೆಯಾದರೆ ಸೌಲಭ್ಯವನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಸಂಘದ ಇತಿಹಾಸದಲ್ಲಿಯೇ ಹೋರಾಟವಿಲ್ಲದೆ ನೌಕರರು ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಆದರೆ ತುಟ್ಟಿ ಭತ್ಯೆ, ಶಿಶುಪಾಲನೆ ರಜೆ, ಇನ್ನಿತರ ಸೌಲಭ್ಯಗಳು ಹೋರಾಟವಿಲ್ಲದೆ ಸಿಕ್ಕಿವೆ. ಈಗಿನ ರಾಜ್ಯ ಸರ್ಕಾರ ನೌಕರರ ಪರವಾಗಿದೆ. ಕೇಂದ್ರದ ನೌಕರರಿಗೆ ತುಟ್ಟಿ ಭತ್ಯೆ ಘೋಷಣೆಯಾದ ಕೇವಲ ಒಂದು ಗಂಟೆಯಲ್ಲೇ ನಮಗೂತುಟ್ಟಿಭತ್ಯೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಜೂರು ಮಾಡಿಕೊಟ್ಟರು ಎಂದು ನೆನಪಿಸಿಕೊಂಡರು.

ನೌಕರರ ಮಕ್ಕಳು ಪ್ರತಿಭಾವಂತರಾಗಿ ತಮ್ಮ ಕಾಲಮೇಲೆ ನಿಂತು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು. ಬೇರೆಡೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ನೌಕರರ ಹೆಚ್ಚಿನ ಸಂಖ್ಯೆಯ ಮಕ್ಕಳು ಶೇ 95ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದಾರೆ. ಇದೇ ಸಾಧನೆಯನ್ನು ಮುಂದುವರಿಸಬೇಕು. ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದುಹೇಳಿದರು.

ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಿದ ಶಾಸಕ ಜಿ.ಬಿ.ಜೋತಿಗಣೇಶ್, ‘ಬಿಜೆಪಿ ಸರ್ಕಾರದಲ್ಲಿ ನೌಕರರಿಗೆ ಹೆಚ್ಚಿನ ಅನುಕೂಲವಾಗಿದೆ. ಎಲ್ಲಾ ಬೇಡಿಕೆಗಳನ್ನು ಯಾವುದೇ ಪ್ರತಿಭಟನೆ ಇಲ್ಲದೆ ಈಡೇರಿಸಲಾಗಿದೆ. ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ನೌಕರರು ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಕು’ ಎಂದು ಸಲಹೆ ಮಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು, ‘ನೌಕರರ ಮಕ್ಕಳಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಪ್ರತಿಭಾಪುರಸ್ಕಾರ ನೀಡಲಾಗುತ್ತಿದೆ. ಹೊಸ ಪಿಂಚಿಣಿ ಬದಲು ಹಳೆ ಪಿಂಚಿಣಿ ವ್ಯವಸ್ಥೆ ಜಾರಿ, ಕೇಂದ್ರ ನೌಕರರಿಗೆ ಸರಿಸಮಾನವಾಗಿ ರಾಜ್ಯದ ನೌಕರರಿಗೂ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್, ಖಜಾಂಚಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎನ್‌.ಜಗದೀಶ್, ನಿರ್ದೇಶಕ ರೇಣುಕಾರಾಧ್ಯ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಆರ್.ಪರಶಿವಮೂರ್ತಿ, ಎಚ್.ವಿ.ವೆಂಕಟೇಶಯ್ಯ, ಡಾ.ಕಿರಣ್, ಎಚ್.ಇ.ರಮೇಶ್, ಜಿ.ಪಿ.ಪರಮೇಶ್, ಜಿ.ಆರ್.ವೆಂಕಟೇಶಯ್ಯ, ಬಿ.ಎಂ.ಲಕ್ಷ್ಮಿಶ್, ಕೆ.ವಿ.ನಾರಾಯಣ್, ಎಚ್.ಎಂ.ರುದ್ರೇಶ್ ಉಪಸ್ಥಿತರಿದ್ದರು.

ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲಾಗಿದೆ. ಅದರಂತೆ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ವತಿಯಿಂದಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT