ಮಕ್ಕಳ ಸಹಾಯವಾಣಿ 1098 ಸೇವೆ ಕಾಟಾಚಾರಕ್ಕಾಗಬಾರದು

7
ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್.ಕೆ ಸೂಚನೆ

ಮಕ್ಕಳ ಸಹಾಯವಾಣಿ 1098 ಸೇವೆ ಕಾಟಾಚಾರಕ್ಕಾಗಬಾರದು

Published:
Updated:
Deccan Herald

ತುಮಕೂರು: ‘ಮಕ್ಕಳ ಸಹಾಯವಾಣಿ ‘1098’ ಸೇವೆ ಕಾಟಾಚಾರಕ್ಕಾಗಬಾರದು. ಸಹಾಯವಾಣಿ ಕರೆ ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯ ಬಿದ್ದರೆ ಪ್ರಕರಣ ದಾಖಲು ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್.ಕೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮಕ್ಕಳ ಕಳ್ಳರಿದ್ದಾರೆ ಎಂಬ ತಪ್ಪು ಮಾಹಿತಿ ಹರಡದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು. ಬಾಲ್ಯವಿವಾಹ ತಡೆ ಹಿಡಿದ ನಂತರ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಾಕ್ಷಣ ಕೆಲಸ ಮುಗಿಯಿತು ಎಂದು ಅಧಿಕಾರಿಗಳು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಬಾರದು. ನಂತರದ ದಿನಗಳಲ್ಲೂ ಕದ್ದು ಮುಚ್ಚಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆಗಳಿರುವುದರಿಂದ ಪೋಷಕರ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು ಎಂದು ಸೂಚಿಸಿದರು.

ಜುಲೈ ತಿಂಗಳಾಂತ್ಯಕ್ಕೆ ಬಾಲ ನ್ಯಾಯ ಮಂಡಳಿ ಮುಂದೆ ಹಿಂದಿನ ವರ್ಷದ ಬಾಕಿ 53 ಪ್ರಕರಣಗಳು ಇತ್ಯರ್ಥಗೊಂಡಿವೆ. ಕಳವು, ಪೊಕ್ಸೋ, ದರೋಡೆ, ಗಲಾಟೆ, ಅಪಘಾತಕ್ಕೆ ಸಂಬಂಧಿಸಿದ 33 ಪ್ರಕರಣಗಳು ಬಾಕಿ ಇವೆ ಎಂದು ಹೇಳಿದರು.

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಕಡ್ಡಾಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಎಚ್‌ಐವಿ ಸೋಂಕಿತ ಮಕ್ಕಳ ಮಾನಸಿಕ ಸ್ಥೈರ್ಯ ವೃದ್ಧಿಸಿ ಅವರ ಭವಿಷ್ಯ ಉತ್ತಮ ರೂಪಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.

ಶಾಲೆ ಬಿಟ್ಟ ಹದಿ ಹರೆಯದ ಮಕ್ಕಳನ್ನು ಮಕ್ಕಳ ಕಾವಲು ಸಮಿತಿ ಹಾಗೂ ರಕ್ಷಣಾ ಸಮಿತಿಗಳು 18 ವರ್ಷದವರೆಗೆ ಪೋಷಣೆ ಮಾಡಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಒಳಗಾಗದಂತೆ ಹಾಗೂ ದುಡಿಮೆಗಾಗಿ ಬೇರೆ ಸ್ಥಳಗಳಿಗೆ ಹೋಗಿ ನೆಲೆಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ಶಾಲೆ ಬಿಟ್ಟ ಮಕ್ಕಳಿಗೆ ವಿವಿಧ ರೀತಿಯ ವೃತ್ತಿ ತರಬೇತಿ ನೀಡಲು ಕೌಶಲ ಕೇಂದ್ರಗಳಲ್ಲಿ ಅವರ ಹೆಸರನ್ನು ನೋಂದಣಿ ಮಾಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಅವರಿಗೆ ಸೂಚಿಸಿದರು.

ವಿಧವಾ ಕೋಶ ನೋಂದಣಿ: ಜಿಲ್ಲೆಯಲ್ಲಿರುವ ವಿಧವೆಯರ ಸಮೀಕ್ಷೆ ನಡೆಸಿ ವಿಧವಾ ಕೋಶಕ್ಕೆ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

14ರಿಂದ 18 ವರ್ಷ ಮೇಲ್ವಟ್ಟ ಶಾಲೆ ಬಿಟ್ಟ ಮಕ್ಕಳು ಶಿಕ್ಷಣ ಪೂರ್ಣ ಪಡೆಯಲು ಕ್ರಮ ಕೈಗೊಳ್ಳಬೇಕು. ಅನುತ್ತೀರ್ಣಗೊಂಟ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ನಡೆಸಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ,‘ ಬಾಲ್ಯವಿವಾಹ ನಿಷೇಧ ಕಾಯ್ದೆ ಯೋಜನೆಯಡಿ ಕಳೆದ ಏಪ್ರಿಲ್‌ನಿಂದ ಜೂನ್‌ವರೆಗೆ ಒಟ್ಟು 22 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್‌.ಜಿನರಾಳ್ಕರ್, ಡಿಎಸ್ಪಿ ಕೆ.ಎಸ್.ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜ್ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !