ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ರಾಜ್ಯದ ಬಜೆಟ್ ಗಾತ್ರ ₹3.80 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ

Published 29 ಜನವರಿ 2024, 12:29 IST
Last Updated 29 ಜನವರಿ 2024, 12:29 IST
ಅಕ್ಷರ ಗಾತ್ರ

ತುಮಕೂರು: ಈ ಬಾರಿ ಮಂಡನೆಯಾಗಲಿರುವ ರಾಜ್ಯದ ಬಜೆಟ್ ಗಾತ್ರ ₹3.80 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ನಗರದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು. ಈವರೆಗೂ ರಾಜ್ಯದ ಬಜೆಟ್ ಗಾತ್ರ ₹3.27 ಕೋಟಿ ದಾಟಿರಲಿಲ್ಲ. ಆದರೆ ಈ ಬಾರಿ ಅದು ಸುಮಾರು ₹50 ಸಾವಿರ ಕೋಟಿ ಹೆಚ್ಚಳವಾಗಲಿದ್ದು, ₹3.80 ಕೋಟಿಗೆ ತಲುಪಲಿದೆ’ ಎಂದರು.

‘ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಖಜಾನೆ ಖಾಲಿಯಾಗಿದೆ. ಸರ್ಕಾರ ದಿವಾಳಿಯಾಗಿದೆ’ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದಿದ್ದರೆ ಬಜೆಟ್ ಗಾತ್ರವನ್ನು ₹3.80 ಲಕ್ಷ ಕೋಟಿಗೆ ಏರಿಕೆ ಮಾಡಲು ಸಾಧ್ಯವೆ. ಹಣವಿಲ್ಲದೆ ಇಷ್ಟೊಂದು ದೊಡ್ಡ ಗಾತ್ರದ ಬಜೆಟ್ ಮಂಡಿಸಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಎಷ್ಟೇ ಹಣ ವೆಚ್ಚವಾದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಇದಕ್ಕಾಗಿ ಈ ವರ್ಷ ₹38 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಮುಂದಿನ ವರ್ಷ ₹58 ಸಾವಿರ ಕೋಟಿ ಮೀಸಲಿಡಲಾಗುವುದು. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಹಣ ಕೊಡಲಾಗಿದೆ. ಹಣ ಇಲ್ಲದೆ ಯಾವುದೇ ಅಭಿವೃದ್ಧಿ ಕೆಲಸಗಳೂ ನಿಂತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳುವವರಿಗೆ ಜಾರಿ ಮಾಡಿರುವ ಗ್ಯಾರಂಟಿಗಳೇ ಉತ್ತರ ನೀಡುತ್ತವೆ. ವಿರೋಧ ಪಕ್ಷಗಳು ಖಜಾನೆ ಬರಿದಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಇದು ಜನರನ್ನು ದಾರಿ ತಪ್ಪಿಸುವ ಕೆಲಸ ಎಂದು ಸಮಜಾಯಿಸಿ ಕೊಟ್ಟರು.

ಕೇಂದ್ರ ನಿರ್ಲಕ್ಷ್ಯ:

ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಅಧ್ಯಯನ ನಡೆಸಿ ವರದಿ ಸಲ್ಲಿಸಿ ನಾಲ್ಕು ತಿಂಗಳಾದರೂ ಹಣ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಪ್ರಧಾನಿ ಮೇಲೆ ಒತ್ತಡ ತಂದು ಪರಿಹಾರದ ಹಣ ಬಿಡುಗಡೆ ಮಾಡಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರದ ಪರಿಹಾರ ಬರುವುದು ತಡವಾಗಿದ್ದು, ರಾಜ್ಯ ಸರ್ಕಾರದಿಂದ ಮೊದಲ ಕಂತಾಗಿ ಪ್ರತಿ ರೈತರಿಗೆ ₹2 ಸಾವಿರ ಇನ್‌ಪುಟ್ ಸಬ್ಸಿಡಿ ಕೊಡಲಾಗುತ್ತಿದೆ. ಈವರೆಗೆ 21.21 ಲಕ್ಷ ರೈತರಿಗೆ ₹555 ಕೋಟಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ವಿರೋಧ ಪಕ್ಷದವರು ಇದನ್ನು ಗಮನಿಸಿ ನಮ್ಮ ಮೇಲೆ ಆರೋಪ ಮಾಡಬೇಕು ಎಂದು ತಿರುಗೇಟು ನೀಡಿದರು.

ಲೋಕಸಭೆಯಲ್ಲೂ ಆಶೀರ್ವದಿಸಿ

ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಬೆಂಬಲಿಸಿದಂತೆ ಮುಂಬರುವ ಲೋಕಸಭೆಯಲ್ಲೂ ಆಶೀರ್ವಾದ ಮಾಡುವಂತೆ ಸಿದ್ದರಾಮಯ್ಯ ಕೇಳಿಕೊಳ್ಳುವ ಮೂಲಕ ಚುನಾವಣೆ ಪ್ರಚಾರಕ್ಕೂ ಚಾಲನೆ ನೀಡಿದರು.

ವಿಧಾನಸಭೆ ಚುನಾವಣೆಗೆ ಮುನ್ನ ಐದು ಗ್ಯಾರಂಟಿ ಜಾರಿಗೆ ತರುವ ಭರವಸೆ ನೀಡಲಾಗಿತ್ತು. ಈಗ ಅನುಷ್ಠಾನಕ್ಕೆ ತರಲಾಗಿದೆ. ಐದು ವರ್ಷಗಳ ಕಾಲ ಗ್ಯಾರಂಟಿ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಲೋಕಸಭೆಯಲ್ಲೂ ಬೆಂಬಲಿಸಿದರೆ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲು ಸಹಕಾರಿಯಾಗಲಿದೆ ಎಂದು ಕೇಳಿಕೊಂಡರು.

‘ಬಿಜೆಪಿಗೆ ಸೋಲಿನ ಭಯ’

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಮಂಡ್ಯದ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಗಲಾಟೆ ಮಾಡುತ್ತಿದ್ದರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವುದೇ ವಿಚಾರ, ವಿವಾದ ಇಲ್ಲದಿದ್ದರೂ ವಿವಾದ ಹುಟ್ಟುಹಾಕಿ ಕೋಮುವಾದ ಸೃಷ್ಟಿಸುತ್ತಿದ್ದಾರೆ. ಸೋಲಿನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿಲ್ಲ. ಅಲ್ಲಿದ್ದವರೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನೆ ಮಾಡಿದ್ದಾರೆ. ಇದರಲ್ಲಿ ಪ್ರಚೋದನೆ ಮಾಡುವ ಉದ್ದೇಶ ಬಿಟ್ಟರೆ ಬೇರೆ ಏನೂ ಇಲ್ಲ. ಚುನಾವಣೆಯ ಲಾಭಕ್ಕಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರಧ್ವಜ, ನಾಡ ಧ್ವಜಾರೋಹಣ ಮಾಡುವುದಾಗಿ ಅನುಮತಿ ಪಡೆದು ಭಗವಾ ಧ್ವಜ ಹಾರಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆಂದು ವಕ್ತಾರರಂತೆ ಮಾತನಾಡುತ್ತಿದ್ದಾರೆ. ಅವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT