ಮಂಗಳವಾರ, ಮೇ 17, 2022
27 °C
ತಿಪಟೂರು

ವಿದ್ಯಾರ್ಥಿಗಳಿಗೆ ಸ್ಪರ್ಧಾವಾಣಿ ಸಹಕಾರಿ: ಎಪಿಎಂಸಿ ನಿರ್ದೇಶಕ ಮಧುಸೂದನ್ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ದೈನಂದಿನ ವಿಚಾರಗಳನ್ನು ಪ್ರತಿಯೊಂದು ಮನೆ-ಮನಗಳಿಗೆ ಮುಟ್ಟಿಸುವ ಜೊತೆಗೆ ಹೊಸ ವಿನ್ಯಾಸ, ನವ ಅಂಕಣಗಳೊಂದಿಗೆ ಓದುಗರನ್ನು ಆಕರ್ಷಿಸುತ್ತಿರುವುದು ಶ್ಲಾಘನೀಯ ಎಂದು ಎಪಿಎಂಸಿ ನಿರ್ದೇಶಕ ಮಧುಸೂದನ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ‘ಪ್ರಜಾವಾಣಿ’ ಹಾಗೂ ಪತ್ರಿಕೋದ್ಯಮ ವಿಭಾಗದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಾವಾಣಿ ಬಿಡುಗಡೆಗೊಳಿಸಿ ಮಾತನಾಡಿದರು.

ಪತ್ರಿಕೆಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನುಕೂಲ
ವಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಪ್ರಜಾವಾಣಿ’ ದಿನಪತ್ರಿಕೆಯಿಂದ ಸ್ಪರ್ಧಾವಾಣಿ ಪ್ರಾರಂಭಿಸಿದ್ದು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಎಸ್‌ವಿಪಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎನ್. ರೇಣುಕಯ್ಯ ಮಾತನಾಡಿ, ‘ಪತ್ರಿಕೆಗಳು ಶಿಕ್ಷಣಾರ್ಥಿಗಳ ಭವಿಷ್ಯದ ಬದುಕಿನ ದಿಕ್ಕನ್ನು ಬದಲಿಸಿ ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಿಸುವ ಸಾಧನಗಳಾಗಿವೆ. ಅಂತಹ ಪತ್ರಿಕೆಗಳನ್ನು ಶಿಕ್ಷಣದ ಜೊತೆಗೆ ಶ್ರದ್ಧೆಯಿಂದ ಓದುವ ಅಭಿರುಚಿಯನ್ನು ರೂಢಿಸಿಕೊಂಡು ತಮ್ಮ ಜ್ಞಾನವನ್ನು ವಿಕಾಸ ಮಾಡಿಕೊಳ್ಳಬೇಕು. ವರ್ತಮಾನದ ಸತ್ಯ ಸಂಗತಿಗಳನ್ನು ಪ್ರತಿಬಿಂಬಿಸುವ ಪತ್ರಿಕೆಗಳ ಆಳ, ವಿಸ್ತಾರಗಳ ಮಹತ್ವವನ್ನು ತಿಳಿಯಬೇಕು. ಸ್ಪರ್ಧಾತ್ಮಕವಾದ ಜಗತ್ತಿನ ಶೈಕ್ಷಣಿಕ ಸವಾಲುಗಳಿಗೆ ಪರಿಹಾರವನ್ನು ನೀಡುವ ಪತ್ರಿಕೆಗಳ ಸಂಪಾದಕೀಯ ಅರ್ಥಪೂರ್ಣ ಲೇಖನಗಳನ್ನು ಓದುವ ಪ್ರವೃತ್ತಿಯನ್ನು ಹೆಚ್ಚಾಗಿ ವೃದ್ಧಿಸಿಕೊಳ್ಳಬೇಕು ಎಂದರು.

ಪ್ರಜಾವಾಣಿ ಮುಖ್ಯ ವರದಿಗಾರ ಕೆ.ಜೆ.ಮರಿಯಪ್ಪ ಮಾತನಾಡಿ, ದಿನಪತ್ರಿಕೆಯಲ್ಲಿ ವಿಚಾರಗಳನ್ನು ಓದುವ ಬಗೆಯನ್ನು ಅರಿತುಕೊಂಡಾಗ ಮಾತ್ರವೇ ಓದುವ ಹವ್ಯಾಸ ವೃದ್ಧಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಂಡರೆ ಮಾತ್ರ ಮುಂದಿನ ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ದಿನಪತ್ರಿಕೆ ಓದುವುದರಿಂದ ಜ್ಞಾನಾರ್ಜನೆ ಜೊತೆಗೆ ಭಾಷೆಯ ಮೇಲಿನ ಹಿಡಿತ, ವಿಚಾರ ಮಂಡನೆಗೆ ಸಹಕಾರಿಯಾಗಲಿದೆ ಎಂದರು.

ಪ್ರಾಂಶುಪಾಲ ಪ್ರೊ.ಕೆ.ಎಂ.ರಾಜಣ್ಣ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನವಂತರಾಗದಿದ್ದರೆ, ನಿರುದ್ಯೋಗ ಸಮಸ್ಯೆ ಕಾಡುತ್ತದೆ. ಅದ್ದರಿಂದ ಹೆಚ್ಚಿನ ವಿಚಾರಗಳನ್ನು ಮನವರಿಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಡಾ.ಡಿ.ಆರ್. ಹೊನ್ನಾಂಜಿನಯ್ಯ ಮಾತನಾಡಿ, ಯುವಕರು ತಮ್ಮಲ್ಲಿನ ಬುದ್ಧಿವಂತಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಸರಿ ದಾರಿಯಲ್ಲಿ ಸಾಗಲು ಅನುಕೂಲವಾಗುತ್ತದೆ. ಆದರ್ಶ ಪುರುಷರ ಚಿಂತನೆ, ಆಲೋಚನೆ ಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎನ್.ನರಸಿಂಹರಾಜು, ‘ಪ್ರಜಾವಾಣಿ’ ತುಮಕೂರು ವಿಭಾಗದ ಪ್ರಸರಣಾ ಕಾರ್ಯನಿರ್ವಾಹಕ ಕೆ.ಆರ್.ಶ್ರೀನಿವಾಸ್, ಕನ್ನಡ ವಿಭಾಗದ ಮುಖ್ಯಸ್ಥೆ ಯಶೋಧ, ಪ್ರೊ.ಚಿಕ್ಕಹೆಗ್ಗಡೆ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ದೇವರಾಜು, ಶಂಕರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು