ಭಾನುವಾರ, ಮೇ 22, 2022
28 °C
ಶಿರಾ ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಟೋಲ್‌ ಸಿಬ್ಬಂದಿ ವರ್ತನೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ರಾಷ್ಟ್ರೀಯ ಹೆದ್ದಾರಿ- 48ರ ಕರೇಜವನಹಳ್ಳಿ ಟೋಲ್‌ಗೇಟ್‌ನಲ್ಲಿ ತಹಶೀಲ್ದಾರ್ ಅವರು ಗುರುತಿನ ಚೀಟಿ ತೋರಿಸಿದರೂ ವಾಹನವನ್ನು ಬಿಡದೆ ತಡೆದ ಸಿಬ್ಬಂದಿಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಯಿತು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಡಾ.ಸಿ‌.ಎಂ.ರಾಜೇಶ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ಸಭೆಯಲ್ಲಿದ್ದ ಜನಪ್ರತಿನಿಧಿಗಳು ಖಂಡಿಸಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಜನರ ಸೇವೆ ಮಾಡಲು ಗ್ರಾಮಗಳಿಗೆ ತೆರಳುತ್ತಾರೆ. ಅವರ ವಾಹನವನ್ನು ಏಕೆ ತಡೆಯುತ್ತೀರಿ ಅವರ ಗುರುತಿನ ಚೀಟಿ ನೋಡಿ ಬಿಟ್ಟು ಕಳುಹಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗೆ ಸೂಚಿಸಿದರು.

ಟೋಲ್‌ನಲ್ಲಿ ಎಲ್ಲವೂ ಕಾನೂನು ರೀತಿ ನಡೆಯುತ್ತಿಲ್ಲ. ಭಾನುವಾರ ಕಿ.ಮೀ ಗಟ್ಟಲೆ ಸಾಲು ನಿಂತಿರುತ್ತದೆ. ಆರ್ಧ ಗಂಟೆ ಕಾಯಬೇಕು. ಕಾನೂನು ಪ್ರಕಾರ 200 ಮೀಟರ್ ಮಾತ್ರ ಸಾಲು ನಿಲ್ಲಬೇಕು. ಇಂತಹ ಸಮಯದಲ್ಲಿ ಉಚಿತವಾಗಿ ಪ್ರಯಾಣಿಸಲು ಬಿಡಿ ಜನದಟ್ಟಣೆ ಕಡಿಮೆಯಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.

ಟೋಲ್‌ಗೇಟ್ ವ್ಯವಸ್ಥಾಪಕ ಶಿವಲಿಂಗಯ್ಯ ಮಾತನಾಡಿ, ಸ್ಥಳೀಯರು ₹275 ವಾಪತಿಸಿ ಪಾಸು ಪಡೆದು ಪಾಸ್ಟ್ ಟ್ರಾಕ್‌ಲೈನ್‌ನಲ್ಲಿ ಸಂಚಾರ ಮಾಡಬಹುದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ₹30 ರಿಂದ ₹40 ಲಕ್ಷ ಖರ್ಚು ಮಾಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದರೂ ಟ್ಯಾಂಕುಗಳಿಗೆ ನೀರು ಹೋಗುತ್ತಿಲ್ಲ. ಎಷ್ಟು ಟ್ಯಾಂಕುಗಳಿಗೆ ನೀರು ಹೋಗುತ್ತಿದೆ, ಇಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿ ಎಂದು ಕುಡಿಯುವ ನೀರು ಇಲಾಖೆಯ ಎಇಇ ಅವರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.

ಬಹುತೇಕ ಅಂಗನವಾಡಿ ಮತ್ತು ಶಾಲೆಗಳಲ್ಲಿ ಟ್ಯಾಂಕ್ ಇಡಲಾಗಿದೆ. ಆದರೆ ನೀರು ಟ್ಯಾಂಕ್‌ಗಳಿಗೆ ಹೋಗುತ್ತಿಲ್ಲ ಎಂದು ಜಿ.ಪಂ ಸದಸ್ಯ ಎಸ್.ರಾಮಕೃಷ್ಣ ದೂರಿದರು.

ತಾಲ್ಲೂಕಿನಲ್ಲಿ 49 ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಿರುವುದಾಗಿ ಎಇಇ ಮಾಹಿತಿ ನೀಡಿದರು.

ಸರ್ಕಾರ ಎಣ್ಣೆ, ಕಾಳುಗಳಿಗೆ ಬೆಂಬಲ ಬೆಲೆ‌ ನಿಗದಿ ಮಾಡಿದೆ. ಜೊತೆಗೆ ಉತ್ತಮ ಬೆಲೆ ಇದೆ ಅದ್ದರಿಂದ ರೈತರಿಗೆ ಎಣ್ಣೆ ಕಾಳು ಬೆಳೆಗಳಾದ ಎಳ್ಳು, ಸೂರ್ಯಕಾಂತಿ ಬೆಳೆಯಲು ಮನವೊಲಿಸುವ ಕೆಲಸ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಸಚಿವ ಜೆ.ಸಿ.ಮಾಧುಸ್ವಾಮಿ‌ ಸೂಚಿಸಿದರು.

ಪಶು ಇಲಾಖೆಯಲ್ಲಿ ಔಷಧಿಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಗೆ ರೈತರು ಜಾನುವಾರುಗಳನ್ನು ಕರೆದುಕೊಂಡು ಬಂದರೆ ವೈದ್ಯರು ಸ್ವಂದಿಸುತ್ತಿಲ್ಲ ಎನ್ನುವ ದೂರುಗಳು ಹೆಚ್ಚು ಕೇಳಿ ಬರುತ್ತಿದೆ ಈ ಬಗ್ಗೆ ಎಚ್ಚರ ವಹಿಸುವಂತೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಎಚ್ಚರಿಸಿದರು.

ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ತಿಪ್ಪೇಸ್ವಾಮಿ, ಜಿ.ಪಂ ಸದಸ್ಯರಾದ ರಾಮಕೃಷ್ಣ, ಅಂಬುಜಾ ಎಸ್.ಆರ್.ಗೌಡ, ತಾ.ಪಂ ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ, ತಹಶೀಲ್ದಾರ್ ಮಮತ, ಇಒ ಲಕ್ಷ್ಮಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು