ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ದುಬಾರಿಯಾದ’ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಕಸರತ್ತು; ತಿಂಗಳಿಗೆ ಕನಿಷ್ಠ ₹1 ಲಕ್ಷ ವೆಚ್ಚ
Last Updated 2 ಸೆಪ್ಟೆಂಬರ್ 2020, 16:46 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಕಾಂಗ್ರೆಸ್ ಸಾರಥ್ಯಕ್ಕೆ ಪಕ್ಷದಲ್ಲಿ ಚುಟುವಟಿಕೆಗಳು ಗರಿಗೆದರಿವೆ. ಆರ್‌.ರಾಮಕೃಷ್ಣ ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಂಡಿದ್ದು, ಈಗ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಲು ಕಸರತ್ತು ಆರಂಭವಾಗಿದೆ.

ಅಧ್ಯಕ್ಷರ ಆಯ್ಕೆ ಚಟುವಟಿಕೆಗಳು ಆರಂಭವಾಗಿ ಮೂರ್ನಾಲ್ಕು ತಿಂಗಳು ಕಳೆದಿವೆ. ಆದರೆ ‘ಖರ್ಚಿನ ಹೊರೆ’ ಎನ್ನುವ ಕಾರಣಕ್ಕೆ ಮುಖಂಡರು ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ.

ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳ ಆಯೋಜನೆ, ಪ್ರತಿಭಟನೆ, ಪಕ್ಷದ ಕಚೇರಿ ನಿರ್ವಹಣೆ– ಹೀಗೆ ತಿಂಗಳಿಗೆ ಕನಿಷ್ಠ ₹ 1 ಲಕ್ಷವನ್ನಾದರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದವರು ಖರ್ಚು ಮಾಡಬೇಕಾಗುತ್ತದೆ. ‘ದುಬಾರಿ’ ಎನ್ನುವ ಕಾರಣಕ್ಕಾಗಿಯೇ ನಾಯಕರು ಅಧ್ಯಕ್ಷ ಸ್ಥಾನವಹಿಸಿಕೊಳ್ಳಲು ಹಿಂದು ಮುಂದು ನೋಡುತ್ತಿದ್ದಾರೆ.

ತಿಪಟೂರು ಮಾಜಿ ಶಾಸಕ ಕೆ.ಷಡಕ್ಷರಿ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ಷಡಕ್ಷರಿ ಹೆಸರು ಮುನ್ನೆಲೆಗೆ ಬಂದಿದೆ. ಮಾಜಿ ಶಾಸಕರಾದ ರಫೀಕ್ ಅಹಮ್ಮದ್, ಕೆ.ಎನ್.ರಾಜಣ್ಣ ಹೆಸರು ಪ್ರಸ್ತಾಪವಾಗಿದೆ.

ಜಿಲ್ಲಾ ಅಧ್ಯಕ್ಷರಾಗಿ ಹಣ ಖರ್ಚು ಮಾಡುವುದಕ್ಕಿಂತ ಆ ಹಣವನ್ನು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಬಳಸಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ಅನುಕೂಲ ಎನ್ನುವ ಲೆಕ್ಕಾಚಾರಗಳು ಮುಖಂಡರಲ್ಲಿ ಇದ್ದಂತಿದೆ. ಇಂತಹ ಹಗ್ಗಜಗ್ಗಾಟ ಇಲ್ಲದಿದ್ದರೆ ಈ ವೇಳೆಗಾಗಲೇ ನೂತನ ಅಧ್ಯಕ್ಷರ ಆಯ್ಕೆ ಆಗಬೇಕಿತ್ತು.

ವಿಧಾನಸಭಾ ಚುನಾವಣೆ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ನಂತರ ಆರ್‌.ರಾಮಕೃಷ್ಣ ಸಾರಥ್ಯ ವಹಿಸಿದ್ದರು. ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದ ಎಡಗೈ ಜನಾಂಗದ ಮತಗಳು ಸಹ ಗಣನೀಯವಾಗಿವೆ. ಇದರಿಂದ ಈ ನಾಯಕರಿಗೆ ಚುಕ್ಕಾಣಿ ನೀಡಲಾಗಿತ್ತು. ಈಗ ಜಿಲ್ಲೆಯಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ಅಧ್ಯಕ್ಷರಾದವರು ಪಕ್ಷ ಸಂಘಟನೆಗೆ ಉದಾರವಾಗಿ ಹಣ ಖರ್ಚು ಮಾಡಲೇಬೇಕಾಗುತ್ತದೆ. ಹೀಗೆ ಹಣ ಖರ್ಚು ಮಾಡಲು ಮನಸ್ಸುಳ್ಳವರು, ಸಂಘಟನೆಗೂ ಅನುಕೂಲ ಆಗುವಂತಹವರಿಗೆ ನಾಯಕತ್ವ ವಹಿಸಬೇಕು ಎನ್ನುವುದು ಮುಖಂಡರ ಲೆಕ್ಕಾಚಾರ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಡಾ.ಜಿ.ಪರಮೇಶ್ವರ ಅವರ ಒಲವು– ನಿಲುವುಗಳು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖವಾಗುತ್ತವೆ.

‘ತಾಲ್ಲೂಕು ಘಟಕದ ಅಧ್ಯಕ್ಷರಾದವರಿಗೆ ತಿಂಗಳಿಗೆ ಕನಿಷ್ಠ ₹50 ಸಾವಿರ ವೆಚ್ಚ ಬರುತ್ತದೆ. ಪ್ರತಿಭಟನೆ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳನ್ನು ಸಂಘಟಿಸಿದರೆ ಖರ್ಚು ಮತ್ತಷ್ಟು ಅಧಿಕವಾಗುತ್ತದೆ. ಪಕ್ಷದ ಇತರೆ ನಾಯಕರು ಕೈ ಜೋಡಿಸಿದರೂ ಅಧ್ಯಕ್ಷರ ಪಾಲೇ ಹೆಚ್ಚಿರುತ್ತದೆ. ತಾಲ್ಲೂಕು ಮಟ್ಟದಲ್ಲಿ ಹೀಗಿರುವಾಗ ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿನ ಖರ್ಚು ವೆಚ್ಚಗಳು ಬರುತ್ತವೆ. ಈ ಕಾರಣಕ್ಕಾಗಿಯೇ ಮುಖಂಡರು ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಮನಸ್ಸು ಮಾಡುತ್ತಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

‘ಒಂದು ವೇಳೆ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದಿದ್ದರೆ ಖರ್ಚು ವೆಚ್ಚಗಳನ್ನು ನಿಭಾಯಿಸಬಹುದಿತ್ತು. ಆದರೆ ಈಗ ಕಷ್ಟಸಾಧ್ಯ ಎನ್ನುವ ಮನೋಭಾವ ಮುಖಂಡರಲ್ಲಿ ಇದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT