ಬುಧವಾರ, ಡಿಸೆಂಬರ್ 1, 2021
21 °C

ರಾಮಮಂದಿರ ನಿರ್ಮಾಣ: ಕರಸೇವಕರು ಹರ್ಷ ಎಂದ ಸೊಗಡು ಶಿವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆ.5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುತ್ತಿರುವುದು ಕರಸೇವಕರಲ್ಲಿ ಹರ್ಷ ಉಂಟು ಮಾಡಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

1992 ರ ಡಿ.6 ರಂದು ಅಯೋಧ್ಯೆಯ ಕರ ಸೇವೆಯಲ್ಲಿ ತುಮಕೂರು ಜಿಲ್ಲೆಯಿಂದ ಅಂದಿನ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಕ.ಬೋರಪ್ಪನವರ ನೇತೃತ್ವದಲ್ಲಿ 70ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದೆವು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

1992 ಡಿ.26 ರಂದು ನಗರದ ಬಿ.ಎಚ್.ರಸ್ತೆಯ ನಾಗರಕಟ್ಟೆಯಲ್ಲಿ ಪೂಜೆ ಸಲ್ಲಿಸಿ, ರೈಲಿನಲ್ಲಿ ಪ್ರಯಾಣಿಸಿದ ಕರಸೇವಕರು ನ.28 ರಂದು ಅಯೋಧ್ಯೆಗೆ ತಲುಪಿದ್ದರು. ಡಿ.6 ಕಾರ್ಯಕ್ರಮದ ನಂತರ ಡಿ.7 ರಂದು ಅಯೋಧ್ಯೆಯಿಂದ ಹೊರಟು ಡಿ.9 ಮತ್ತು ಡಿ.10 ರಂದು ಎರಡು ತಂಡಗಳಲ್ಲಿ ತುಮಕೂರು ನಗರಕ್ಕೆ ಕ್ಷೇಮವಾಗಿ ಹಿಂದಿರುಗಿದ್ದೆವು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಡಿ.6 ರಂದು ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ದೇಶದಾದ್ಯಂತ 3 ಲಕ್ಷ ಕರ ಸೇವಕರು ಭಾಗವಹಿಸಿದ್ದು, ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ ಜೋಷಿ ಮುಂತಾದ ಹಿರಿಯ ನಾಯಕರ ನೇತೃತ್ವದಲ್ಲಿ ಪೊಲೀಸರ ಸರ್ಪಗಾವಲನ್ನು ಬೇಧಿಸಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿ, ತಾತ್ಕಾಲಿಕವಾಗಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು ಎಂದರು.

ನೂರಾರು ವರ್ಷಗಳ ನ್ಯಾಯಾಂಗ ಹೋರಾಟಕ್ಕೆ ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದ ನ್ಯಾಯ ದೊರೆತಿದ್ದು, ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಮೂಲಕ ಕರಸೇವಕರ ಕನಸು ನನಸಾಗಿದೆ ಎಂದರು.

ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ವಿಚಾರ ಒಂದು ರೀತಿ ಖುಷಿ. ಆದರೆ, ಅಂದು ನಮ್ಮ ಜತೆಗಿದ್ದ ಅನೇಕ ಕರ ಸೇವಕರು ನಿಧನರಾಗಿರುವುದರಿಂದ ವ್ಯಥೆಯಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಸಾಗರನಹಳ್ಳಿ ನಂಜೇಗೌಡ, ಎಚ್.ಕೆ.ಶಿವಣ್ಣ, ಎಚ್.ಎಸ್.ನಾಗಭೂಷಣ್, ಸಿದ್ದರಾಮಯ್ಯ, ಮುನಿರಾಜು, ಅ.ನ.ಲಿಂಗಪ್ಪ, ಮೇರುನಾಥ್, ವೇದಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು