ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕಲುಷಿತ ನೀರು ಸೇವನೆ: ಮಗು ಸೇರಿ ಮೂವರು ಸಾವು

Published 12 ಜೂನ್ 2024, 20:17 IST
Last Updated 12 ಜೂನ್ 2024, 20:17 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ (ಜೂನ್‌ 10) ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಮೂರು ವರ್ಷದ ಮಗು ಸೇರಿ ಮೂವರು ಬುಧವಾರ ಸಾವನ್ನಪ್ಪಿದ್ದಾರೆ.

ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೀನಾಕ್ಷಿ (3) ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76)  ಮತ್ತು ಪೆದ್ದಣ್ಣ (74) ಮೃತಪಟ್ಟಿದ್ದಾರೆ. 

ವಾಂತಿ, ಬೇಧಿಯಿಂದ ಬುಧವಾರ ಬೆಳಗ್ಗೆ ಮೀನಾಕ್ಷಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಆಕೆಯನ್ನು ಪೋಷಕರು ವಾಪಸ್‌ ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಗೆ ಹೋದ ನಂತರ ಮತ್ತೇ ತೀವ್ರ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಳು.

ಚಿನ್ನೇನಹಳ್ಳಿ ಗ್ರಾಮದ ಓವರ್‌ ಹೆಡ್‌ ಟ್ಯಾಂಕ್‌ ಮತ್ತು ಶುದ್ಧ ನೀರಿನ ಘಟಕದಿಂದ ಪೂರೈಸುವ ನೀರು ಸೇವಿಸಿ ವಾಂತಿ, ಬೇಧಿಯಿಂದ ಗ್ರಾಮದ 98 ಜನ ಅಸ್ವಸ್ಥರಾಗಿದ್ದರು. ಆ ಪೈಕಿ 59 ಜನ ಗುಣಮುಖರಾಗಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ 16, ಮಧುಗಿರಿಯಲ್ಲಿ 18, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಜಿಲ್ಲಾ ಆಸ್ಪತ್ರೆಯಲ್ಲಿ 6 ತಿಂಗಳ ಮಗು ಸೇರಿದಂತೆ 15 ವರ್ಷದೊಳಗಿನ ಏಳು ಜನ, 45 ರಿಂದ 70 ವರ್ಷದ ಒಳಗಿನ ಒಂಬತ್ತು ಜನ ದಾಖಲಾಗಿದ್ದಾರೆ. ಎಲ್ಲರು ಆರೋಗ್ಯವಾಗಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆಸ್ಗರ್‌ ಬೇಗ್‌ ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ಜೂನ್‌ 7ರಿಂದ ಲಕ್ಷ್ಮಿದೇವಿ ಮತ್ತು ಕೆಂಪಮ್ಮ ಜಾತ್ರೆ ನಡೆಯುತ್ತಿತ್ತು. ಜೂನ್‌ 10 ರಂದು ರಾತ್ರಿ 54 ಮಂದಿಗೆ ದಿಢೀರನೇ ವಾಂತಿ, ಬೇಧಿ ಶುರುವಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT