ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು: ಬೋರನಕಣಿವೆ ಜಲಾಶಯಕ್ಕೆ ಕಲುಷಿತ ನೀರು

Published : 26 ಸೆಪ್ಟೆಂಬರ್ 2024, 14:27 IST
Last Updated : 26 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ಹುಳಿಯಾರು: ಪಟ್ಟಣದ ಕಲುಷಿತ ನೀರು ಹಾಗೂ ತ್ಯಾಜ್ಯ ಶಿರಾ ರಸ್ತೆಯಲ್ಲಿರುವ ಠೋಕ್ರಿ ಬನ್ಕಿ ಭೀಮಮ್ಮನ ದೇಗುಲ ಆವರಣ ಹಾಗೂ ಸುತ್ತಮುತ್ತಲ ಮನೆಗಳ ಪಕ್ಕ ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ದೇಗುಲ ಸಮಿತಿಯವರು ಹಾಗೂ ಗ್ರಾಮಸ್ಥರು ದೂರಿದ್ದಾರೆ.

ಪಟ್ಟಣದಲ್ಲಿ ಸಂಗ್ರಹವಾದ ಕೊಳಚೆ ನೀರು ಚರಂಡಿ ಮೂಲಕ ಹರಿದು ತಗ್ಗು ಪ್ರದೇಶವಾಗಿರುವ ಎಸ್‌ಎಲ್‌ಆರ್‌ ಪೆಟ್ರೋಲ್‌ ಬಂಕ್‌ ವೃತ್ತದ ಮೂಲಕ ಭೀಮಮ್ಮನ ಗುಡಿ ಆವರಣ ಸೇರುತ್ತಿದೆ.

ಭೀಮಮ್ಮನ ದೇಗುಲದ ಸುತ್ತಮುತ್ತ ಹತ್ತಾರು ಮನೆಗಳಿದ್ದು, ಮನೆಗಳಲ್ಲಿ ವಾಸಿಸುವುದು ದುಸ್ತರವಾಗಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.

ಭೀಮಮ್ಮನ ದೇಗುಲದ ಹಿಂಭಾಗದ ತೋಟದಲ್ಲಿ ಕೊಳಚೆ ನೀರು ನಿಲ್ಲುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸದಾ ದುರ್ವಾಸನೆ ಬೀರುತ್ತದೆ. ಈ ಬಗ್ಗೆ ಈಗಾಗಲೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಶಂಕರೇಶ್‌ ಆರೋಪಿಸಿದ್ದಾರೆ.

‘ಅಮಾನಿ ಕೆರೆ ತುಂಬಿದಾಗ ಸಹಜವಾಗಿಯೇ ನೀರು ಜಲಾಶಯ ಸೇರುತ್ತಿತ್ತು. ಆದರೆ ಈಗ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕವಾಗಿ ಮಾಡಿರುವುದರಿಂದ ನೀರು ಸಲೀಸಾಗಿ ಹರಿದು ಜಲಾಶಯ ಸೇರಲು ಕಾರಣವಾಗಿದೆ. ಇದೇ ಬೋರನಕಣಿವೆ ನೀರನ್ನು ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದೆ. ಪಟ್ಟಣದ ಕಲುಷಿತ ನೀರು ಬೋರನಕಣಿವೆ ಒಡಲು ಸೇರಿ ಮತ್ತೆ ಅದೇ ನೀರು ಪಟ್ಟಣಕ್ಕೆ ಸರಬರಾಜಾಗುತ್ತಿದೆ. ಕೊಳಚೆ ನೀರಿನ ಜತೆ ಬಿ.ಎಚ್.ರಸ್ತೆಯಲ್ಲಿರುವ ಕಲ್ಯಾಣ ಮಂಟಪ ಹಾಗೂ ಪಟ್ಟಣದ ತ್ಯಾಜ್ಯ ಕೂಡ ಬೋರನಕಣಿವೆ ಸೇರುತ್ತಿದೆ. ಇದರಿಂದ ಜಲಾಶಯದ ನೀರು ಮಲಿನಗೊಳ್ಳುತ್ತದೆ’ ಎಂದು ಗಾರೇ ಕರಿಯಾನಾಯ್ಕ ದೂರಿದ್ದಾರೆ.

ಭೀಮಮ್ಮನ ದೇಗುಲ ಸಮಿತಿಯ ಗಾರೇ ಕರಿಯಾನಾಯ್ಕ, ರವಿನಾಯ್ಕ, ಯಜಮಾನ್‌ ಕರಿಯಾನಾಯ್ಕ, ಬಳ್ಳೇಕಟ್ಟೆ ಕರಿಯಾನಾಯ್ಕ, ಭೀಮಾನಾಯ್ಕ, ಮಲ್ಲಿಕಾರ್ಜುನ, ಚಿದಾನಂದಮೂರ್ತಿ, ದೊಡ್ಡಬಿದರೆ ಕುಮಾರ್‌, ಗಂಗಾಧರಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT